ಕನ್ನಡ ಶಾಲೆಗಳ ರಕ್ಷಣೆಗೆ ಹಾಗೂ ಶಾಲೆಗಳಿಗೆ ವಿಧಿಸಿದ ಷರತ್ತುಗಳನ್ನು ಸಡಿಲಗೊಳಿಸಲು ಮತ್ತು ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆಗೆ ಆಗ್ರಹಿಸಿ ಧರಣಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕನ್ನಡ ಶಾಲೆಗಳ ರಕ್ಷಣೆಗೆ ಹಾಗೂ ಶಾಲೆಗಳಿಗೆ ವಿಧಿಸಿದ ಷರತ್ತುಗಳನ್ನು ಸಡಿಲಗೊಳಿಸಲು ಹಾಗೂ ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ವಿಭಾಗೀಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟ ತಾಲೂಕು ಘಟಕದ ನೇತೃತ್ವದಲ್ಲಿ ಧರಣಿ ನಡೆಸಿದ ಪದಾಧಿಕಾರಿಗಳು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ್ರಮುಖರು, ಕಳೆದ 9-10 ವರ್ಷಗಳಿಂದ ಕರ್ನಾಟಕದಲ್ಲಿ ಸಾವಿರಾರು ಕನ್ನಡ ಶಾಲೆಗಳು ಮುಚ್ಚಿರುವುದಕ್ಕೆ ಕಾರಣ ಸರ್ಕಾರದ ವಿಪರಿತ ಕಠಿಣ ನಿಯಮಗಳು, ಇವುಗಳಿಂದ ಕನ್ನಡ ಶಾಲೆಗಳು ಸೋತು ಸೊರಗುತ್ತಿವೆ. ಇವತ್ತು ನಮ್ಮ ಮಾತೃ ಭಾಷೆ ಉಳಿಯಬೇಕು. ಕನ್ನಡ ಉಳಿಯಬೇಕು ಅಂದರೆ, ಕನ್ನಡ ಶಾಲೆಗಳ ಸಮಗ್ರ ವಿಕಾಸವಾಗಬೇಕು. ಇದು ಸರ್ಕಾರದ ಮುಖ್ಯ ಧೈಯವಾಗಬೇಕು. ಆದರೆ, ದುರಾದೃಷ್ಟವಶಾತ್ ಇದು ಆಗುತ್ತಿಲ್ಲ, ಸರ್ಕಾರದ ದಿವ್ಯ ನಿರ್ಲಕ್ಷದಿಂದ ಪ್ರತಿ ವರ್ಷ ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಕರ್ನಾಟಕದ ಮಟ್ಟಿಗೆ ಬಹಳ ಚಿಂತಾಜನಕ ಸಂಗತಿಯಾಗಿದೆ. ಹಲವಾರು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು ಸರ್ಕಾರದ ನೂರಾರು ನಿಯಮಗಳಿಂದ ಸೋತು ಸುಣ್ಣವಾಗಿವೆ. ಶಾಲೆಗಳನ್ನು ನಡೆಸಲು ಆಗದ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಗಳ ಮಾರಣಹೋಮ ಆಗುತ್ತಿವೆ ಎಂದು ಹೇಳಿದರು.
ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವ ಮೂಲಕ ಕನ್ನಡ ಭಾಷೆ, ಕನ್ನಡ ಸಂಸ್ಕೃತಿಯನ್ನು ಉಳಿಸಲು ಸರ್ಕಾರ ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆಯನ್ನು ಜಾರಿಗೆ ತರಲು ಆಗ್ರಹಿಸಿದರು.
1995ರ ನಂತರ ಪ್ರಾರಂಭವಾದ ಖಾಸಗಿ ಶಾಲಾ ಕಾಲೇಜುಗಳಿಗೆ ಅನುದಾನಕ್ಕೆ ಒಳಪಡಿಸಬೇಕು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನವೀಕರಣ ಪ್ರಕ್ರಿಯೆ ಸರಳೀಕರಣಗೊಳಿಸಬೇಕು, ಕನ್ನಡ ಶಾಲೆಗಳನ್ನು ಪ್ರಾರಂಭಿಸಲು ಷರತ್ತುಗಳು ಸರಳೀಕರಣಗೊಳಿಸಬೇಕು, ಬಡ ಮಕ್ಕಳಿಗೆ ದಾರಿದೀಪವಾಗಿದ್ದ ಆರ್.ಟಿ.ಇ ಪ್ರವೇಶಗಳನ್ನು ಖಾಸಗಿ ಶಾಲೆಗಳಿಗೆ ಮರುಜಾರಿಗೆ ಮಾಡಬೇಕು, ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, 371(ಜೆ) ಕಾನೂನು ಅಡಿಯಲ್ಲಿ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಖಾಸಗಿ ಅನುದಾನ ರಹಿತ ಶಾಲೆಗಳಿಗೂ ನೀಡಬೇಕು, ರಾಜ್ಯಾದ್ಯಂತ ಅನಧೀಕೃತ ಕೋಚಿಂಗ್ ಸೆಂಟರ್ಗಳನ್ನು ಮುಚ್ಚಬೇಕು, ಕನ್ನಡ ಶಾಲೆಗಳನ್ನು ರಕ್ಷಿಸಿ ಕನ್ನಡವನ್ನು ಉಳಿಸಬೇಕು, ಕನ್ನಡ ಶಾಲೆಗಳನ್ನು ಬಂದ್ ಮಾಡಿ, ಕರ್ನಾಟಕ ಪಬ್ಲಿಕ್ ಶಾಲೆ (ಆಂಗ್ಲ ಮಾಧ್ಯಮ) ಪ್ರಾರಂಭಿಸುತ್ತಿರುವುದು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ತಾಲೂಕು ಅಧ್ಯಕ್ಷ ಜಗದೇವ ದಿಗ್ಗಾಂವಕರ್, ಕಾರ್ಯದರ್ಶಿ ಪ್ರದೀಪ್ ಕುಲಕರ್ಣಿ, ಶಿವುಕುಮಾರ ಘವಾರೀಯಾ, ರವಿ ಕುಲಕರ್ಣಿ, ಬಸವರಾಜ ಪಿ.ಬಿ, ಶಿವುಕುಮಾರ ದೊಶೆಟ್ಟಿ, ಶಿವಪುತ್ರ, ಸಾಬಣ್ಣ, ನಾಗರಾಜ್, ಆಶೀಯಾ ಬೇಗಂ, ರಾಧೀಕಾ, ರಾಜೇಶ್ರೀ, ಮುಬೀನಾ ಬೇಗಂ, ರೇಣುಕಾ, ಸೌಂದರ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

