ಚಿತ್ತಾಪುರ ಬೃಹತ್ ಲೋಕ್ ಅದಾಲತ್‌ನಲ್ಲಿ ರಾಜಿ ಸಂಧಾನ, ಒಂದಾದ ದಂಪತಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ನ್ಯಾಯಾಲಯದಲ್ಲಿ ನಡೆದ ಬೃಹತ್ ಲೋಕ್ ಅದಾಲತ್‌ನಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶ್ರೀ ಕಿಶನ್ ಮಾಡಲಗಿ ಅವರ ಮಧ್ಯಸ್ಥಿಕೆ ಮತ್ತು ಮಾರ್ಗದರ್ಶನದಿಂದ ಒಂದು ವೈವಾಹಿಕ ಪ್ರಕರಣವು ಯಶಸ್ವಿಯಾಗಿ ರಾಜಿ ಸಂಧಾನಗೊಂಡಿದೆ.
ಈ ಮೂಲಕ ದೂರವಾಗಿದ್ದ ದಂಪತಿಗಳು ಮತ್ತೆ ಒಂದಾಗಿ ಬಾಳ್ವೆ ನಡೆಸಲು ಒಪ್ಪಿಕೊಂಡಿದ್ದು, ಕೌಟುಂಬಿಕ ವಿವಾದವೊಂದು ಸುಖಾಂತ್ಯ ಕಂಡಿದೆ.
ಸದರಿ ಪ್ರಕರಣದಲ್ಲಿ ದಂಪತಿಗಳ ನಡುವಿನ ಭಿನ್ನಾಭಿಪ್ರಾಯಗಳು ತೀವ್ರಗೊಂಡು ವಿಚ್ಛೇದನದ ಹಂತ ತಲುಪಿದ್ದವು. ಆದರೆ ನ್ಯಾಯಾಧೀಶರಾದ ಶ್ರೀ ಕಿಶನ್ ಮಾಡಲಗಿ ಅವರ ಸೂಕ್ತ ಸಲಹೆ ಮತ್ತು ಸಂಧಾನ ಪ್ರಕ್ರಿಯೆಯಿಂದಾಗಿ ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಮತ್ತೆ ಒಟ್ಟಾಗಿ ಜೀವನ ನಡೆಸಲು ನಿರ್ಧರಿಸಿದರು.
ರಾಜಿ ಸಂಧಾನದ ನಂತರ ದಂಪತಿಗಳು ಪರಸ್ಪರ ಹೂ ಮಾಲೆಗಳನ್ನು ಬದಲಾಯಿಸಿಕೊಂಡು, ಸಿಹಿ ತಿನ್ನಿಸುವ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡರು. ಈ ದೃಶ್ಯ ಲೋಕ ಅದಾಲತ್‌ನಲ್ಲಿ ಹಾಜರಿದ್ದವರ ಗಮನ ಸೆಳೆಯಿತು. ಅವರ ಈ ನಿರ್ಧಾರವು ನ್ಯಾಯಾಲಯದ ಆವರಣದಲ್ಲಿ ನೆರೆದಿದ್ದವರಲ್ಲಿ ಸಂತಸ ಮೂಡಿಸಿತು.
ಕೌಟುಂಬಿಕ ಸಮಸ್ಯೆಗಳಿಂದಾಗಿ ದೂರವಾಗಿದ್ದ ಅನೇಕ ಜೋಡಿಗಳಿಗೆ ಈ ಪ್ರಕರಣವು ಒಂದು ಉತ್ತಮ ಉದಾಹರಣೆಯಾಗಿದೆ. ಲೋಕ ಅದಾಲತ್‌ಗಳು ಇಂತಹ ಪ್ರಕರಣಗಳನ್ನು ಸಾಮರಸ್ಯದಿಂದ ಇತ್ಯರ್ಥಪಡಿಸಲು ಸಹಕಾರಿಯಾಗುತ್ತವೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನವಾಗಿದೆ.

