ಚಿತ್ತಾಪುರ ಪ್ರಜಾ ಸೌಧ ನಾಳೆ ಲೋಕಾರ್ಪಣೆ | ವಿವಿಧ ಇಲಾಖೆಗಳ ಸೇವೆ ಒಂದೇ ಸೂರಿನಡಿ, ಜನರಿಗೆ ಅನುಕೂಲ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಆಡಳಿತಕ್ಕೆ ಹೈಟೆಕ್ ಸ್ಪರ್ಶ ದೊರಕಿದ್ದು, ಅದು ಮತ್ತಷ್ಟು ಜನಸ್ನೇಹಿಯಾಗುತ್ತಿದೆ. ಸರ್ಕಾರದ ಕಂದಾಯ ಇಲಾಖೆಯ ಸುಮಾರು 18.41 ಕೋಟಿ ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿಯು ನಿರ್ಮಿಸಿರುವ ಭವ್ಯ ಹಾಗೂ ಸುಸಜ್ಜಿತವಾದ ಪ್ರಜಾ ಸೌಧ (ಮಿನಿ ವಿಧಾನಸೌಧ) ಕಟ್ಟಡವು, ಜುಲೈ 4 ರಂದು ಬೆಳಗ್ಗೆ 11 ಗಂಟೆಗೆ ಲೋಕಾರ್ಪಣೆಗೊಳ್ಳುತ್ತಿದೆ.
14 ಇಲಾಖೆಗಳು ಈ ಮೂರು ಅಂತಸ್ತಿನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿವೆ. ಇದರಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸೇವೆಗಳು ಜನಸಾಮಾನ್ಯರಿಗೆ ಒಂದೇ ಸೂರಿನಡಿ ಲಭ್ಯವಾಗಲಿದೆ. ಸಾರ್ವಜನಿಕರಿಗಾಗಿ ವಿಶಾಲವಾದ ಆಸನ ವ್ಯವಸ್ಥೆ ಹಾಗೂ ಶೌಚಾಲಯ ಸೌಕರ್ಯಗಳು ಇಲ್ಲಿವೆ. ಇಲಾಖೆಗಳ ಸಿಬ್ಬಂದಿಯ ಸುಗಮ ಕಾರ್ಯಾಚರಣೆಗೆ ಅನುಕೂಲಕರವಾದ ಸವಲತ್ತುಗಳನ್ನು ಈ ಕಟ್ಟಡ ಒಳಗೊಂಡಿದೆ.
“ಸರ್ಕಾರದ ವಿವಿಧ ಇಲಾಖೆಗಳ ಸೇವೆ ಒಂದೇ ಸೂರಿನಡಿ ಜನರಿಗೆ ಒದಗಿಸುವ ನಮ್ಮ ಸಂಕಲ್ಪ ಈಡೇರುತ್ತದೆ ಈ ನಿಟ್ಟಿನಲ್ಲಿ ಜನಪರ ಆಡಳಿತ ಸೇವೆ ಒದಗಿಸುವುದು ನಮ್ಮ ಸರ್ಕಾರದ ಧ್ಯೇಯ. ಎಲ್ಲ ಅನುಕೂಲತೆಗಳನ್ನು ಒಳಗೊಂಡ ಅತ್ಯಾಧುನಿಕ ಆಡಳಿತ ಕಚೇರಿಗಳ ನಿರ್ಮಾಣವು ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನದ ಒಂದು ಭಾಗವಾಗಿದೆ”.-ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು.
“14 ಇಲಾಖೆಗಳ ಸೇವೆ ಒಂದೇ ಸೂರಿನಡಿ ಸಿಗುವುದರಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ ಇದರ ಶ್ರೇಯಸ್ಸು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲುತ್ತದೆ ಅವರ ಮುತುವರ್ಜಿಯಿಂದ ಇಂತಹ ಸುಸಜ್ಜಿತ ಭವ್ಯ ಕಟ್ಟಡ ನಿರ್ಮಾಣವಾಗಿದೆ. ತಹಸೀಲ್ದಾರ್ ಕಚೇರಿಗೆ ಬರುವವರು ಇತರೆ ಇಲಾಖೆಗಳನ್ನು ನೋಡಬಹುದು ಇದರಿಂದ ಸಾರ್ವಜನಿಕರ ಅಲೆದಾಟ ತಪ್ಪಲಿದೆ, ನಾಳೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ”.-ನಾಗಯ್ಯ ಹಿರೇಮಠ ತಹಸೀಲ್ದಾರರು ಚಿತ್ತಾಪುರ.

