ಚಿತ್ತಾಪುರದಲ್ಲಿ ಬಿಎಲ್ಎಗಳಿಗೆ ಎಸ್ಐಆರ್ ತರಬೇತಿ | ಎಸ್ಐಆರ್ಗೆ ಎಲ್ಲ ಪಕ್ಷಗಳ ಸಹಕಾರ ಅಗತ್ಯ: ತಹಸೀಲ್ದಾರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಯಶಸ್ವಿ ಹಾಗೂ ಪಾರದರ್ಶಕವಾಗಿರಲು ರಾಜಕೀಯ ಪಕ್ಷಗಳ ಬೂತ್ ಲೆವೆಲ್ ಏಜೆಂಟ್ ಬಿಎಲ್ಎಗಳ ಸಹಕಾರ ಅಗತ್ಯ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ತಾಲೂಕು ಆಡಳಿತದಿಂದ ಮಂಗಳವಾರ ಆಯೋಜಿಸಿದ್ದ ಎಸ್ಐಆರ್ ಕುರಿತು ಬಿಎಲ್ಎ ಏಜೆಂಟರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳುವುದು ಬಿಎಲ್ಎಗಳ ಜವಾಬ್ದಾರಿಯಾಗಿದ್ದು, ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಜೂ.30 ರಿಂದ ಜು.29 ರವರೆಗೆ ಬಿಎಲ್ಒಗಳು ಮನೆ-ಮನೆಗೆ ಭೇಟಿ ನೀಡಿ, ಮತದಾರರಿಗೆ ಎನ್ಯುಮರೇಷನ್ ಫಾರ್ಮ್ ವಿತರಿಸಿ, ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಬಿಎಲ್ಎಗಳ ಪಾತ್ರ ಬಹಳ ದೊಡ್ಡದು. ನೀವು ವ್ಯವಸ್ಥೆಯ ಬೆನ್ನೆಲುಬಿದ್ದಂತೆ. ಮತದಾರರ ಪಟ್ಟಿಯ ವಿತರಣೆ (Distribution), ಅರ್ಜಿಗಳ ಸಂಗ್ರಹಣೆ (Collection) ಮತ್ತು ಡಿಜಿಟಲೀಕರಣ (Digitalization) ಮಾಡುವಾಗ ಬಹಳ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ. ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಸಹಾಯ ಮಾಡಿ, ಆದರೆ ಯಾವುದೇ ಸೌಲಭ್ಯ ನೀಡುವ ನೆಪದಲ್ಲಿ ಬಿಎಲ್ಓ ಅವರುಗಳಿಗೆ ಷರತ್ತುಗಳನ್ನು ಹಾಕುವಂತಿಲ್ಲ. ಒಗ್ಗೂಡಿ ಕೆಲಸ ಮಾಡುವುದು ನಿಮ್ಮ ಕರ್ತವ್ಯ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮತದಾರರ ಪಟ್ಟಿಯಲ್ಲಿ ಯಾವುದೇ ತಪ್ಪುಗಳಿರಬಾರದು. ಬಿಎಲ್ಎಗಳು ತಮ್ಮ ವ್ಯಾಪ್ತಿಯ ಪ್ರತಿಯೊಂದು ಮನೆಗೂ ಭೇಟಿ ನೀಡಿ, ಅರ್ಹ ಮತದಾರರು ಪಟ್ಟಿಯಲ್ಲಿ ಇರುವಂತೆ ಮತ್ತು ಅನರ್ಹರು ಹೊರಗುಳಿಯುವಂತೆ ನೋಡಿಕೊಳ್ಳಬೇಕು. ಈ ಪಟ್ಟಿಯ ಶುದ್ಧೀಕರಣವು ನಿರಂತರ ಪ್ರಕ್ರಿಯೆ, ಹಾಗಾಗಿ ನಿಮ್ಮ ಜವಾಬ್ದಾರಿ ಹಿರಿದು ಎಂದು ತಿಳಿಸಿದರು.
ವೇದಿಕೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ವಾಡಿ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ್ ಹಾಗೂ ತಾಲೂಕು ಪಂಚಾಯತ್ ಎಡಿ ಪಂಡಿತ್ ಸಿಂಧೆ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸುನೀಲ್ ದೊಡ್ಡಮನಿ, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಹಮೂದ್ ಸಾಹೇಬ್, ಶೀಲಾ ಕಾಶಿ, ಮುಕ್ತಾರ್ ಪಟೇಲ್, ಮಲ್ಲಿಕಾರ್ಜುನ ಕಾಳಗಿ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಬಿಎಲ್ಎ-1 (ಬಿಜೆಪಿ) ಬಸವರಾಜ ಬೆಣ್ಣೂರಕರ್, ನಾಗರಾಜ ಭಂಕಲಗಿ, ಸುರೇಶ ರಾಠೋಡ, ಜಾಫರ್ ಸೇಠ್, ನಾಗರಾಜ ಹೂಗಾರ, ಆನಂದ ಪಾಟೀಲ ನರಿಬೋಳ, ಉದಯ ಸಿಂಪಿ, ಶೇಖ ಬಬ್ಲು, ಚಂದ್ರಶೇಖರ ಕಾಶಿ, ಅಯ್ಯಪ್ಪ ರಾಮತೀರ್ಥ, ಮಲ್ಲಿಕಾರ್ಜುನ ಇಟಗಿ, ತಮ್ಮಣ್ಣ ಡಿಗ್ಗಿ, ಮುಜೀಬ್ ಜುನೈದಿ ಸೇರಿದಂತೆ ವಾಡಿ ಮತ್ತು ಚಿತ್ತಾಪುರ ಭಾಗದ ಬಿಎಲ್ಎ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ವಿನೋದ ಗೌಳಿ, ಮಲ್ಲಿಕಾರ್ಜುನ, ಕಾಶಿರಾಯ ಕಲಾಲ್ ಮತ್ತು ಉದಯಕುಮಾರ ಇಂಗಳೆ, ದೇವೇಂದ್ರಪ್ಪ ದೊರೆ, ಬಸ್ಸಪ್ಪ ಯಂಬತ್ನಾಳ ತರಬೇತಿ ನೀಡಿದರು.
ಅರ್ಹರ ನೋಂದಣಿ: 18 ವರ್ಷ ತುಂಬಿದ ಪ್ರತಿಯೊಬ್ಬ ಯುವ ಮತದಾರರ ಹೆಸರನ್ನು ಪಟ್ಟಿಗೆ ಸೇರಿಸಲು ಆಸಕ್ತಿ ವಹಿಸುವುದು. ದೋಷಗಳ ತಿದ್ದುಪಡಿ: ಮೃತಪಟ್ಟವರು ಅಥವಾ ಬೇರೆ ಕಡೆಗೆ ಸ್ಥಳಾಂತರಗೊಂಡವರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಅಗತ್ಯ ದಾಖಲೆಗಳೊಂದಿಗೆ ಫಾರ್ಮ್-7 ಸಲ್ಲಿಸುವುದು. ನಿಖರತೆ: ಹೆಸರು, ವಿಳಾಸ ಅಥವಾ ಜನ್ಮದಿನಾಂಕದಲ್ಲಿನ ತಪ್ಪುಗಳನ್ನು ಸರಿಪಡಿಸಲು ಫಾರ್ಮ್-8 ಬಳಸುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವುದು. BLO ಜೊತೆ ಸಮನ್ವಯ: ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿದಾಗ, ಏಜೆಂಟರು ಅವರಿಗೆ ಸೂಕ್ತ ಮಾಹಿತಿ ಮತ್ತು ಸಹಕಾರ ನೀಡುವ ಮೂಲಕ ಪಟ್ಟಿಯನ್ನು ಶುದ್ಧೀಕರಿಸಲು ನೆರವಾಗಬೇಕು ಎಂದು ಹೇಳಿದರು.

