ಡಾ. ರವೀಂದ್ರನಾಥ ಹೊಸಮನಿಗೆ ಹೃದಯಸ್ಪರ್ಶಿ ಸನ್ಮಾನ | ಉಪನ್ಯಾಸಕರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಸಾಮಾನ್ಯ ಸಾಧನೆಯಲ್ಲ: ಬಾಣತಿಹಾಳ
ನಾಗಾವಿ ಎಕ್ಸಪ್ರೆಸ್
ಶಹಾಪುರ: ಬುದ್ಧಿಜೀವಿಗಳ ಹಾಗೂ ಉಪನ್ಯಾಸಕರ ವಲಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅಂತಹ ವಲಯದಲ್ಲಿಯೇ ಡಾ.ರವೀಂದ್ರನಾಥ್ ಹೊಸಮನಿ ಎಲ್ಲರ ಪ್ರೀತಿ, ವಿಶ್ವಾಸ ಮತ್ತು ಒಪ್ಪಿಗೆಯನ್ನು ಗಳಿಸಿ ಉಪನ್ಯಾಸಕರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಸಾಮಾನ್ಯ ಸಾಧನೆಯಲ್ಲ ಎಂದು ಮುಖಂಡ ಗಿರಿಪ್ಪಗೌಡ ಬಾಣತಿಹಾಳ ಹೇಳಿದರು
ನಗರದ ಮಾತೋಶ್ರೀ ಫಂಕ್ಷನ್ ಹಾಲಿನಲ್ಲಿ ಸಮಾನ ಮನಸ್ಕರ ಬಳಗ ಶಹಾಪುರ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಡಾ. ರವೀಂದ್ರನಾಥ ಹೊಸಮನಿ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಡಾ. ಹೊಸಮನಿ ಅವರ ಸರಳ ವ್ಯಕ್ತಿತ್ವ, ಎಲ್ಲರೊಂದಿಗೆ ಬೆರೆಯುವ ಗುಣ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸುವ ನಾಯಕತ್ವದ ಕಾರಣದಿಂದಲೇ ಈ ಗೌರವ ಅವರಿಗೆ ದೊರೆತಿದೆ ಎಂದು ಹೇಳಿದರು.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲೆ ಸುರಯ್ಯಾ ಬೇಗಂ ಹಾದಿಮನಿ ಮಾತನಾಡಿ, ಸಮಾಜಕ್ಕೆ ಡಾ. ರವೀಂದ್ರನಾಥ ಹೊಸಮನಿ ಅವರಂತಹ ವ್ಯಕ್ತಿತ್ವಗಳು ಅತ್ಯಂತ ಅಗತ್ಯವೆಂದು ಹೇಳಿದರು. ಸಮಾಜವು ಒಬ್ಬ ವ್ಯಕ್ತಿಯನ್ನು ಕೇವಲ ಗುರುತಿಸುವುದಲ್ಲ, ಆತನನ್ನು ಅಳೆದು ತೂಗಿ ಆಯ್ಕೆ ಮಾಡುತ್ತದೆ. ಅದಕ್ಕೆ ಜೀವಂತ ಸಾಕ್ಷಿಯೇ ಡಾ. ರವೀಂದ್ರನಾಥ ಹೊಸಮನಿ ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ಹಾಗೂ ಶೈಕ್ಷಣಿಕ ಕಳಕಳಿಯನ್ನು ಹೊಂದಿರುವ ವ್ಯಕ್ತಿಯಾಗಿದ್ದು, ಅವರ ಚಿಂತನೆಗಳು ವಿದ್ಯಾರ್ಥಿಗಳಿಗೆ ತಲುಪಬೇಕಾದ ಅಗತ್ಯ ಇಂದಿನ ಕಾಲಘಟ್ಟದಲ್ಲಿದೆ. ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯುವ ಸಂಘಟನಾ ಚಾತುರ್ಯ, ತಾಳ್ಮೆ ಮತ್ತು ಪರಿಶ್ರಮ ಅವರ ವ್ಯಕ್ತಿತ್ವದ ಪ್ರಮುಖ ಗುಣಗಳಾಗಿವೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ಹಾಗೂ ಪ್ರಗತಿಪರ ಚಿಂತಕ ಆರ್. ಚನ್ನಬಸ್ಸು ವನದುರ್ಗ ಮಾತನಾಡಿ, ಡಾ. ರವೀಂದ್ರನಾಥ ಹೊಸಮನಿ ಅವರಿಗೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಜವಾಬ್ದಾರಿಗಳು ಹಾಗೂ ಇನ್ನಷ್ಟು ಉನ್ನತ ಹುದ್ದೆಗಳು ದೊರಕಲಿ ಎಂದು ಶುಭ ಹಾರೈಸಿದರು.
ಹಿರಿಯ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ, ಇಂದಿನ ಸಮಾಜದಲ್ಲಿ ಇನ್ನೂ ಲಿಂಗ ತಾರತಮ್ಯ ಮತ್ತು ಮೌಢ್ಯತೆ ಜೀವಂತವಾಗಿರುವ ಸಂದರ್ಭದಲ್ಲಿ ಡಾ. ಹೊಸಮನಿ ಅವರು ತಮ್ಮ ಪತ್ನಿಯನ್ನು ವೇದಿಕೆಯ ಮೇಲೆ ಗೌರವಯುತವಾಗಿ ಬಲಗಡೆ ಕೂರಿಸಿಕೊಂಡಿರುವುದು ಹೆಣ್ಣು-ಗಂಡು ಸಮಾನತೆಯ ಪ್ರತೀಕವಾಗಿದೆ ಎಂದು ಹೇಳಿದರು. ಹೆಣ್ಣು ಕೂಡ ಸಮಾನ ಹಕ್ಕು ಮತ್ತು ಗೌರವಕ್ಕೆ ಅರ್ಹಳು ಎಂಬ ಸಂದೇಶವನ್ನು ಅವರು ತಮ್ಮ ನಡೆ-ನುಡಿಗಳ ಮೂಲಕವೇ ಸಮಾಜಕ್ಕೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶೇಷ ಉಪನ್ಯಾಸಕರಾಗಿ ಭೀಮಣ್ಣ ಅಂಚೆಸೂಗುರು ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಹೋರಾಟದ ಮನೋಭಾವವನ್ನು ಬೆಳೆಸಿಕೊಂಡು ಬಂದಿರುವ ಡಾ. ಹೊಸಮನಿ ಅವರು ನಮಗೆಲ್ಲರಿಗೂ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದರು. ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್ (ISI) ಮೂಲಕ ಅವರು ಆಯೋಜಿಸಿದ ಅಧ್ಯಯನ ಮತ್ತು ತರಬೇತಿ ಶಿಬಿರಗಳಿಂದ ಬೆಳೆದ ಅನೇಕ ವಿದ್ಯಾರ್ಥಿಗಳು ಇಂದು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಮತ್ತು ಚಳುವಳಿಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾವೂ ಕೂಡ ಅಂತಹ ಅಧ್ಯಯನ ಶಿಬಿರದ ಶಿಬಿರಾರ್ಥಿಯಾಗಿದ್ದೆ ಎಂಬುದನ್ನು ಹೆಮ್ಮೆಯಿಂದ ಸ್ಮರಿಸಿದರು.
ಈ ಸಂದರ್ಭದಲ್ಲಿ ಸೈಯದ್ ಖಾದ್ರಿ ಶರಣಬಸವ ಪೊಲೀಸ್ ಬಿರಾದರ್ ತಿಪ್ಪಣ್ಣ ಕ್ಯಾತನಾಳ, ಸಾಯಬಣ್ಣ ಪುರ್ಲೆ, ಶೇಖರ್ ದೊರೆ ದೇವೇಂದ್ರಪ್ಪ ಮಡಿವಾಳಕಾರ್, ಸಂತೋಷ್ ಜುನ್ನ ಸಾಹೇಬಣ್ಣ ಮೈತ್ರೆ ಅಯ್ಯಣ್ಣ ಇನಾಂದಾರ್ ಧರ್ಮಣ್ಣ ಗೌಡ, ಮೋನಯ್ಯ ಹೊಸಮನಿ, ಬಸವರಾಜ್ ಸಿನ್ನೂರ್ ದೇವಣ್ಣ ಮೇಟಿ, ನಾಗರಾಜ್ ದೇಸಾಯಿ, ಬಸವರಾಜ ಬಳಬಟ್ಟಿ,ನಿಂಗಣ್ಣ ಯಕ್ಷಿಂತಿ ಚಂದ್ರಕಾಂತ್ ರಸ್ತಾಪುರ್ ಪುರುಷೋತ್ತಮ ಬಾಬಾಲಾದ್ ನಾಗನಗೌಡ ಪೊಲೀಸ್ ಪಾಟೀಲ್, ಮಲ್ಲಿಕಾರ್ಜುನ್ ಪಾಟಿಲ್ ಹಿರಿಯ ಪತ್ರಕರ್ತ ಪ್ರಕಾಶ್ ದೊರೆ, ಡಾ. ರವೀಂದ್ರನಾಥ ಹೊಸಮನಿ ಅವರ ಶಿಷ್ಯ ಬಳಗ, ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ರಂಗನಾಥ ದೊರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊನ್ನಪ್ಪ ಗಂಗನಾಳ ಸ್ವಾಗತಿಸಿದರು, ಮಡಿವಾಳಪ್ಪ ಪಾಟೀಲ ಕಾರ್ಯಕ್ರಮ ನಿರೂಪಿಸಿದರು, ಶ್ರೀಶೈಲ್ ಬಿರಾದಾರ ವಂದಿಸಿದರು.

