ಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ರೈತ ಸಂಘ ಮನವಿ | ಕಲಬುರಗಿ ಜಿಲ್ಲೆ ಬರಪೀಡಿತ ಪ್ರದೇಶ ಘೋಷಣೆ, ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಜಮಾದಾರ ಆಗ್ರಹ
ನಾಗಾವಿ ಎಕ್ಸಪ್ರೆಸ್ ಕಲಬುರಗಿ
ಕಲಬುರಗಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶ ಎಂದು ಕೂಡಲೇ ಘೋಷಣೆ ಮಾಡಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಜಿಲ್ಲಾಧ್ಯಕ್ಷ ಮಹಾಂತೇಶ್ ಜಮಾದಾರ್ ನೇತೃತ್ವದಲ್ಲಿ ಪದಾಧಿಕಾರಿಗಳು ಮಂಗಳವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಲಬುರಗಿ ಜಿಲ್ಲೆಯ ರೈತರು ಬರಗಾಲದಿಂದ ಸಂಕಷ್ಟ ಪಡುತ್ತಿದ್ದಾರೆ. ಆದಕಾರಣ ಕೂಡಲೇ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಚಿತ್ತಾಪುರ ತಾಲೂಕಿನ ಸಿಮೆಂಟ್ ಕಂಪನಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮನಬಂದಂತೆ ದರ ನಿಗದಿಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಪ್ರತಿ ಎಕರೆಗೆ ರೂ.80 ಲಕ್ಷದಿಂದ 90 ಲಕ್ಷ ರೂಪಾಯಿ ದರ ನಿಗದಿ ಮಾಡಿ ಆದೇಶಿಸಬೇಕು, ಆಳಂದ ತಾಲೂಕಿನಲ್ಲಿ ಸೋಲಾರ್ ಮತ್ತು ವಿಂಡ್ ಫ್ಯಾನ್ ಕಂಪನಿಯವರ ಜೊತೆ ಕೆಲವು ಅಧಿಕಾರಿಗಳು ಕೂಡಕೊಂಡು ರೈತರ ಜಮೀನು ಮನ ಬಂದಂತೆ ಖರೀದಿ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಪ್ರತಿ ಎಕರೆಗೆ ರೂ.80 ರಿಂದ 90 ಲಕ್ಷ ರೂಪಾಯಿ ದರ ನಿಗದಿ ಮಾಡಿ ಆದೇಶಿಸಬೇಕು ಎಂದು ಒತ್ತಾಯಿಸಿದರು.
ದೇವಲಗಾಣಗಾಪೂರ ಮುಂದೆ ಅಡ್ಡಲಾಗಿ ಕಟ್ಟಿರುವ ಬ್ರಿಜ್ ಕಂ.ಬ್ಯಾರೇಜಿಗೆ ಹೈಡೋಲಿಕ್ ಗೇಟ್ ಕೂಡಲೇ ಅಳವಡಿಸಬೇಕು, ಬೆಳೆ ವಿಮೆ ಎರಡನೇ ಕಂತು ಕೂಡಲೇ ಬಿಡುಗಡೆ ಮಾಡಬೇಕು, ಉಜ್ಜಯಿನಿ ಆಣೆಕಟ್ಟಿನಿಂದ ಅಥವಾ ಆಲಮಟ್ಟಿ ಆಣೆಕಟ್ಟಿನಿಂದ ಭೀಮಾ ನದಿಗೆ 3 ಟಿಎಂಸಿ ನೀರು ಕೂಡಲೇ ಬಿಡುಗಡೆ ಮಾಡಿಸಬೇಕು. ಈ ಹಕ್ಕೊತ್ತಾಯಗಳನ್ನು ಕೂಡಲೇ ಈಡೇರಿಸಿ ಒಂದು ವಾರದೊಳಗೆ ರೈತರಿಗೆ ಸಿಹಿ ಸುದ್ದಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿಠ್ಠಲ್ ಮಾಕಾಗೌಡ್ರು, ಜಿಲ್ಲಾ ಯುವ ಅಧ್ಯಕ್ಷ ಶ್ರೀಶೈಲ್ ಕನ್ನಡಗಿ, ಚಿತ್ತಾಪುರ ತಾಲೂಕು ಅಧ್ಯಕ್ಷ ಶ್ಯಾಮರಾಯ ಸಂಗಾವಿ, ಆಳಂದ ತಾಲೂಕು ಅಧ್ಯಕ್ಷ ಸಂಗನಬಸವ ಘಂಟಿ, ಗೌರವಾಧ್ಯಕ್ಷ ಸುರೇಂದ್ರ ಪಾಟೀಲ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸಕ್ಕರಗಿ ಸೇರಿದಂತೆ ಇತರರು ಇದ್ದರು.

