ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ನಾಳೆ | ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಗೆ ಶಿಕ್ಷಕ ಮತದಾರರು ಬೆಂಬಲಿಸಿ: ಭೀಮಣ್ಣ ಸಾಲಿ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕ ಮತದಾರರು ಬಿಜೆಪಿ ಅವರ ಅಪಪ್ರಚಾರಕ್ಕೆ ಒಳಗಾಗದೆ, ಜಾಗ್ರತೆಯಿಂದ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರಿಗೆ ಮೊದಲ ಪ್ರಾಶಸ್ತ್ಯ ಮತವನ್ನು ನೀಡಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮನವಿ ಮಾಡಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಕುಲಗೆಟ್ಟ ಮತಗಳಿಂದ ಶರಣಪ್ಪ ಮಟ್ಟೂರ ಸೋಲನ್ನು ಅನುಭವಿಸಿದ್ದರು. ಆದರೆ ಈ ಬಾರಿ ಶಿಕ್ಷಕ ಮತದಾರರು ಶರಣಪ್ಪ ಮಟ್ಟೂರ ಗೆಲ್ಲಿಸಲು ಉತ್ಸಾಹ ತೋರಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ಈಗಾಗಲೇ ಬೀದರ್ ನಿಂದ ಹರಪನಹಳ್ಳಿ ವರೆಗೆ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ ಹಾಗೂ ಕಲಬುರ್ಗಿಯಲ್ಲಿ ವಿಭಾಗ ಮಟ್ಟದ ಸಭೆ ನಡೆಸಿ ಆಯಾ ಕ್ಷೇತ್ರದ ಶಾಸಕರಿಗೆ ಮಾಜಿ ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಚಿತ್ತಾಪುರ ಮತಕ್ಷೇತ್ರದಲ್ಲಿ ಶರಣಪ್ಪ ಮಟ್ಟೂರ ಅವರಿಗೆ ಹೆಚ್ಚಿನ ಮತಗಳು ಲಭಿಸುವ ವಿಶ್ವಾಸ ಇದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಶಿಕ್ಷಕ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರಿಗೆ ಬೆಂಬಲಿಸಿದರೆ ಅಭಿವೃದ್ಧಿ ಕೆಲಸಗಳು ಹಾಗೂ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಅನುಕೂಲವಾಗುತ್ತದೆ. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಹೈಕೋರ್ಟ್ ಅಷ್ಟೇ ಅಲ್ಲ ಸುಪ್ರೀಂಕೋರ್ಟ್ ಹಿರಿಯ ವಕೀಲರಾಗಿದ್ದು, ಚಾಣಾಕ್ಷರಾಗಿದ್ದಾರೆ ಹಾಗೂ ಒಂದು ಅವಧಿಗೆ ಎಂಎಲ್ಸಿ ಆಗಿ ಸೇವೆ ಸಲ್ಲಿಸಿದ ಅನುಭವ ಇದೆ ಹೀಗಾಗಿ ಶಿಕ್ಷಕ ಪ್ರಬುದ್ಧ ಮತದಾರರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಶಶೀಲ್ ನಮೋಶಿ ಅವರಿಗೆ ಎಚ್.ಕೆ.ಇ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನೇ ನಿಭಾಯಿಸಲು ಆಗುತ್ತಿಲ್ಲ ಹೀಗಿರುವಾಗ ಎಂಎಲ್ಸಿ ಸ್ಥಾನ ನಿಭಾಯಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಕಳೆದ 20 ವರ್ಷಗಳಿಂದ ಶಿಕ್ಷಕರ ಮತಕ್ಷೇತ್ರದಿಂದ ಗೆದ್ದ ನಮೋಶಿ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡಿಲ್ಲ ಇವರೊಬ್ಬ ನಿಷ್ಕ್ರಿಯ ಎಂಎಲ್ಸಿ ಆಗಿದ್ದಾರೆ. ಆದ್ದರಿಂದ ಶಿಕ್ಷಕ ಮತದಾರರು ನಮೋಶಿ ಅವರನ್ನು ತಿರಸ್ಕರಿಸಿ ಮಟ್ಟೂರ ಅವರಿಗೆ ಬೆಂಬಲಿಸಬೇಕು ಕರೆ ನೀಡಿದರು.
ಸಚಿವ ಪ್ರಿಯಾಂಕ್ ಖರ್ಗೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿ ಸಾಕಷ್ಟು ಅನುದಾನ ನೀಡಿದ್ದಾರೆ. ಈಗಾಗಲೇ ಶಿಕ್ಷಕರ ಭವನಕ್ಕೆ 2 ಕೋಟಿ ಅನುದಾನ ನೀಡಿದ್ದಾರೆ ಎಂದರು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಎಂಎಲ್ಎ, ಎಂ.ಪಿ, ಜಿಪಂ, ತಾಪಂ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಮತ ಯಾಚಿಸುವ ಬಿಜೆಪಿ ನಾಯಕರು ಈಗ ಎಂಎಲ್ಸಿ ಚುನಾವಣೆಯಲ್ಲಿಯೂ ಮತ ಕೇಳುವ ಮೂಲಕ ತಮ್ಮ ಅಭ್ಯರ್ಥಿ ಅಸಮರ್ಥ ಎಂದು ಸಾಬೀತು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ನಮೋಶಿ 20 ವರ್ಷಗಳಿಂದ ಶಿಕ್ಷಕರ ಮತಕ್ಷೇತ್ರದಿಂದ ಗೆಲ್ಲುತ್ತಾ ಬಂದಿದ್ದಾರೆ ಆದರೆ ಜಿಲ್ಲೆಯಲ್ಲಿ ಒಂದು ಶಿಕ್ಷಕರ ಭವನ ನಿರ್ಮಾಣ ಮಾಡಲು ಆಗಿಲ್ಲ, ಇದೇ ದುರ್ದೈವ ಹಾಗೂ ಇದೇ ಅವರ ಸಾಧನೆ ಎಂದು ಟೀಕಿಸಿದರು. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮೆಟ್ಟೂರ ಹೈಕೋರ್ಟ್ ವಕೀಲರಾಗಿದ್ದು ಈ ಬಾರಿ ಹೊಸ ಮುಖಕ್ಕೆ ಅವಕಾಶ ಮಾಡಿಕೊಡಬೇಕು ಶಿಕ್ಷಕ ಮತದಾರರಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವರುದ್ರಪ್ಪ ಭೀಣ್ಣಿ, ಜಗಣ್ಣಗೌಡ ರಾಮತೀರ್ಥ, ಮಲ್ಲಿಕಾರ್ಜುನ ಕಾಳಗಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಎಂ.ಎ.ರಷೀದ್, ಶ್ರೀಮಂತ ಗುತ್ತೇದಾರ, ದೇವು ಯಾಬಾಳ, ದೇವಿಂದ್ರ ತಳವಾರ, ಸಂಜಯ್ ಬುಳಕರ್, ಹಣಮಂತ ಸಂಕನೂರ, ಬಸವರಾಜ ಚಿನ್ನಮಳ್ಳಿ, ಭೀಮರಾಯ ಹೊತಿನಮಡಿ, ಸುಭಾಶ್ಚಂದ್ರ ಪವಾರ, ಸುರೇಶ್ ಗುತ್ತೇದಾರ, ಪ್ರಭು ಹಲಕರ್ಟಿ ಸೇರಿದಂತೆ ಇತರರು ಇದ್ದರು.

