Oplus_0

ಮಹಿಳಾ ಮೀಸಲಾತಿ ಬಿಲ್ ವಿಫಲ: ಕಾಂಗ್ರೆಸ್ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಕಿಡಿ

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಮಹತ್ವದ ವಿಧೇಯಕಕ್ಕೆ ಅಗತ್ಯ ಬಹುಮತ ದೊರೆಯದೆ ವಿಫಲವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ (ಇಂಡಿಯಾ) ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನೀತಾ ಚೌವ್ಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಮಹಿಳೆಯರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮುಂದಿಟ್ಟ ಐತಿಹಾಸಿಕ ಬಿಲ್‌ಗೆ ಕಾಂಗ್ರೆಸ್ ಮಿತ್ರಪಕ್ಷಗಳು ಬೆಂಬಲ ನೀಡದಿರುವುದು ಖಂಡನೀಯ ಎಂದು ಹೇಳಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರಕ್ಕೆ ಮಾತ್ರವಲ್ಲ, ದೇಶದ ಪ್ರತಿಯೊಬ್ಬ ಮಹಿಳೆಗೆ ಮಾಡಿದ ಅಪಮಾನವಾಗಿದೆ ಎಂದು ಆರೋಪಿಸಿದ್ದಾರೆ.

ಮಹಿಳಾ ಮೀಸಲಾತಿ ಹಲವು ದಶಕಗಳಿಂದ ಬಾಕಿಯಿದ್ದ ಪ್ರಮುಖ ವಿಚಾರವಾಗಿದ್ದು, ಅದನ್ನು ಜಾರಿಗೆ ತರುವ ಅವಕಾಶವನ್ನು ಕಾಂಗ್ರೆಸ್ ರಾಜಕೀಯ ಕಾರಣಗಳಿಂದ ಕೈಚೆಲ್ಲಿದೆ. ಮಾತಿನಲ್ಲಿ ಮಹಿಳಾ ಪರ ನಿಲುವು ತೋರಿಸುವ ಕಾಂಗ್ರೆಸ್, ಕಾರ್ಯದಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ಇದಲ್ಲದೆ, ಮಹಿಳೆಯರ ರಾಜಕೀಯ ಪ್ರತಿನಿಧಿತ್ವ ಹೆಚ್ಚಿಸುವುದು ದೇಶದ ಸಮಗ್ರ ಅಭಿವೃದ್ಧಿಗೆ ಅಗತ್ಯವಾಗಿದೆ. ಗ್ರಾಮ ಪಂಚಾಯಿತಿಯಿಂದ ಸಂಸತ್ತಿನವರೆಗೆ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವುದು ಜನತಾಂತ್ರಿಕ ವ್ಯವಸ್ಥೆಯ ಬಲವರ್ಧನೆಗೆ ಸಹಕಾರಿ ಎಂದು ಹೇಳಿದರು.

ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಸಂದರ್ಭದಲ್ಲಿ, ಇಂತಹ ಮಹತ್ವದ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುವುದು ಕಾಂಗ್ರೆಸ್ ಪಕ್ಷದ ದ್ವಂದ್ವ ನಿಲುವನ್ನು ಬಯಲಿಗೆಳೆದಿದೆ ಎಂದು ಹೇಳಿದ್ದಾರೆ.

ವಿಧೇಯಕ ವಿಫಲವಾದ ಹಿನ್ನೆಲೆ, ರಾಜ್ಯ ಹಾಗೂ ಜಿಲ್ಲೆಯಾದ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು. ಪ್ರತಿಭಟನೆಗಳ ಮೂಲಕ ಜನರಿಗೆ ಕಾಂಗ್ರೆಸ್‌ನ ನಿಜಸ್ವರೂಪ ತಿಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಇನ್ನೂ ಕೆಲವರು ವಿಧೇಯಕ ಸೋಲಿನ ಹಿನ್ನೆಲೆ ವಿಜಯೋತ್ಸವ ಆಚರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಮಹಿಳೆಯರ ಹಕ್ಕುಗಳ ವಿಚಾರದಲ್ಲಿ ಇಂತಹ ರಾಜಕೀಯ ನಡೆಗಳು ಜನವಿರೋಧಿ ಎಂದು ಕಿಡಿಕಾರಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!