ಧರ್ಮಸ್ಥಳ ಸಂಸ್ಥೆಯಿಂದ ಹೊಲಿಗೆ ತರಬೇತಿ | ಕೌಶಲ್ಯ ವೃದ್ಧಿಯಿಂದ ಮಾತ್ರ ಮಹಿಳೆಯರ ಆರ್ಥಿಕ ಸಬಲತೆ ಸಾಧ್ಯ: ಲೂಸಿಪ್ರಿಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೌಶಲ್ಯಗಳು ಅತ್ಯಂತ ಅಗತ್ಯ. ಮಹಿಳೆಯರು ಧರ್ಮಸ್ಥಳ ಸಂಸ್ಥೆ ನೀಡುತ್ತಿರುವ ಮೂರು ತಿಂಗಳ ಉಚಿತ ಹೊಲಿಗೆ ತರಬೇತಿಯ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ಜ್ಯೋತಿ ಸೇವಾ ಕೇಂದ್ರದ ನಿರ್ದೇಶಕಿ ಸಿಸ್ಟರ್ ಲೂಸಿಪ್ರಿಯ ಕರೆ ನೀಡಿದರು.
ಪಟ್ಟಣದ ಪೆದ್ದು ಮಠದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ರಾಧಾ ಕೃಷ್ಣ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯೋಜನಾಧಿಕಾರಿ ಗುರುರಾಜ್ ಬಿ., ಸಂಸ್ಥೆಯ ಸಾಲು ಸಾಲು ಜನಪರ ಯೋಜನೆಗಳ ಕುರಿತು ವಿವರಿಸಿದರು. ತರಬೇತಿಯ ನಂತರ ಮಹಿಳೆಯರು ಸ್ವ-ಉದ್ಯೋಗ ಪ್ರಾರಂಭಿಸಲು ‘ಸಿಡ್ಬಿ’ (SIDBI) ಸಂಸ್ಥೆಯ ಮೂಲಕ ದೊರೆಯುವ ಸಾಲ ಸೌಲಭ್ಯಗಳು ಮತ್ತು ಹಣಕಾಸಿನ ಸದ್ಬಳಕೆಯ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಪುರಸಭೆಯ ಮಾಜಿ ಸದಸ್ಯ ಶ್ಯಾಮ್ ಮೇಧಾ ಮಾತನಾಡಿ, ಮಹಿಳೆಯರು ಉಚಿತ ತರಬೇತಿಯ ಗರಿಷ್ಠ ಪ್ರಯೋಜನ ಪಡೆದು, ಸ್ವ-ಉದ್ಯೋಗದ ಮೂಲಕ ತಮ್ಮ ಕುಟುಂಬಕ್ಕೆ ಆರ್ಥಿಕ ಆಸರೆಯಾಗಬೇಕು ಎಂದು ಹೇಳಿದರು.
ಹೊಲಿಗೆ ತರಬೇತಿ ಶಿಕ್ಷಕಿ ಕವಿತಾ, ಸೇವಾಪ್ರತಿನಿಧಿ ತ್ರಿವೇಣಿ ಹಾಗೂ ಸಂಘದ ಸದಸ್ಯರು, ತರಬೇತುದಾರರು ಉಪಸ್ಥಿತರಿದ್ದರು. ಮೇಲ್ವಿಚಾರಕಿ ಶ್ರೀಗೌರಿ ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅರ್ಚನಾ ಕಾರ್ಯಕ್ರಮ ನಿರೂಪಿಸಿ, ವಂದನೆ ಸಲ್ಲಿಸಿದರು.

