ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಚಾರಗೋಷ್ಠಿ | ಮಕ್ಕಳ ಬೆಳವಣಿಗೆ ಪೋಷಕರ ಕೈಯಲ್ಲಿ: ಚೈತ್ರಾ ಪ್ರಶಾಂತ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಉತ್ತಮ ಭವಿಷ್ಯಕ್ಕಾಗಿ ಪಾಲಕರು ತಮ್ಮ ಮಕ್ಕಳ ಶಿಕ್ಷಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಗಂಗಾ ಪರಮೇಶ್ವರಿ ಕಾಲೇಜಿನ ಉಪನ್ಯಾಸಕಿ ಚೈತ್ರಾ ಪ್ರಶಾಂತ್ ಹೇಳಿದರು.
ಪಟ್ಟಣದ ಕಂಬಳೇಶ್ವರ ಕಲ್ಯಾಣ ಮಂಟಪದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಶಿಕ್ಷಣದಲ್ಲಿ ಪಾಲಕರ ಪಾತ್ರ ಕುರಿತು ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು.
ಮಕ್ಕಳ ಶಿಕ್ಷಣ ಕೇವಲ ಶಾಲೆಯ ಶಿಕ್ಷಕರ ಹೊಣೆ ಮಾತ್ರವಲ್ಲ. ಪೋಷಕರು ಮನೆಯಲ್ಲಿಯೇ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಸಹಾಯ ನೀಡಬೇಕು. ಪಾಲಕರ ಪ್ರೋತ್ಸಾಹ ಮತ್ತು ಮಾರ್ಗದರ್ಶನವೇ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಮತ್ತು ಜೀವನ ನೈಪುಣ್ಯಕ್ಕೆ ಸ್ಥಿರ ಹಂತವನ್ನು ಕಲ್ಪಿಸುತ್ತದೆ ಎಂದರು.
ಮಕ್ಕಳಲ್ಲಿ ಕೌಶಲ್ಯ, ಆತ್ಮವಿಶ್ವಾಸ ಮತ್ತು ಶಿಸ್ತಿನ ಬೆಳವಣಿಗೆಗೆ ಪಾಲಕರ ಸಕ್ರಿಯ ಭಾಗವಹಿಸುವಿಕೆಯ ಅಗತ್ಯವನ್ನು ಗಮನ ಸೆಳೆದರು. ಜೊತೆಗೆ ಶಿಕ್ಷಣ ಪಡೆದ ಮಹಿಳೆಯೇ ಕುಟುಂಬವನ್ನೇ ಅಲ್ಲ, ಸುತ್ತಮುತ್ತಲ ಸಮಾಜವನ್ನೂ ಧನಾತ್ಮಕವಾಗಿ ಪ್ರಭಾವಿತ ಮಾಡಬಲ್ಲಳು ಎಂದರು
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕವಿತಾ ಎನ್. ಭಂಕಲಗಿ ಉದ್ಘಾಟಿಸಿದರು ಮತ್ತು ಅನ್ನಪೂರ್ಣ ಹೋತಿನಮಡಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಎಸ್ಐ ಬಾಬುರಾವ್, ಯಾದಗಿರಿ ಜಿಲ್ಲಾ ನಿರ್ದೇಶಕ ವಸಂತಗೌಡ ಬಿ, ನ್ಯಾಯವಾದಿ ಅಶ್ವತ್ ರಾಠೋಡ, ಸ್ವಪ್ನಾ ಜೆ. ಪಾಟೀಲ್, ಅಕ್ಕಮಹಾದೇವಿ ಎನ್. ದೊಡ್ಡಮನಿ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ನೂರಾರು ಮಹಿಳೆಯರು, ಮೇಲ್ವಿಚಾರಕರು, ಸೇನೆಯವರು, ಸಿಬ್ಬಂದಿ ವರ್ಗದವರು ಹಾಜರಿದ್ದರು. ಕ್ಷೇತ್ರ ಯೋಜನಾಧಿಕಾರಿ ಗುರುರಾಜ ಪ್ರಾಸ್ತಾವಿಕ ಮಾತನಾಡಿದರು. ಮೇಲ್ವಿಚಾರಕಿ ಅರ್ಚನಾ ನಿರೂಪಣೆ ಮಾಡಿದರು.

