ಚಿತ್ತಾಪುರ ಭೀಮನಡಿಗೆ ಪಥಸಂಚಲನ ಹಾಗೂ ಸಂವಿಧಾನ ಸಮಾವೇಶಕ್ಕೆ ಅನುಮತಿ: ತಹಸೀಲ್ದಾರ್ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದಲ್ಲಿ ಡಿಸೆಂಬರ್ 1 ರಂದು ಬಜಾಜ್ ಕಲ್ಯಾಣ ಮಂಟಪದಲ್ಲಿ ನಡೆಯುವ ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ಭೀಮನಡಿಗೆ ಪಥಸಂಚಲನ ಹಾಗೂ ಸಂವಿಧಾನ ಸಮಾವೇಶ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಆದೇಶಿಸಲಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

ಅರ್ಜಿದಾರ ಮಲ್ಲಿಕಾರ್ಜುನ ಬೆಣ್ಣೂರಕರ್ ಮುಖಂಡರು, ಸಂವಿಧಾನ ಸಂರಕ್ಷಣ ಸಮಿತಿ ಚಿತ್ತಾಪುರ ರವರು ಚಿತ್ತಾಪುರ ಪಟ್ಟಣದಲ್ಲಿ ಕಾರ್ಯಕ್ರಮ ನಡೆಸಲು ಕೋರಿದ ಮನವಿಯಂತೆ, ಮುಖ್ಯಾಧಿಕಾರಿಗಳು ಪುರಸಭೆ ಚಿತ್ತಾಪುರ ಮತ್ತು ಪೊಲೀಸ್ ವೃತ್ತ ನಿರೀಕ್ಷಕರು ಚಿತ್ತಾಪುರ ರವರ ವರದಿಯನ್ನಾಧರಿಸಿ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಅನುಮತಿ ನೀಡಿ ಆದೇಶಿಸಲಾಗಿದೆ.

ಹತ್ತು ಷರತ್ತುಗಳು: 

1) ಭೀಮ ನಡಿಗೆ ಪಥ ಸಂಚಲನ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವವರು, ಚಿತ್ತಾಪುರ ಕಂದಾಯ ತಾಲೂಕಿನವರಾಗಿರಬೇಕು. 2) ಡಿಸೆಂಬರ್ 1 ರಂದು ಸಂವಿಧಾನ ಪೀಠಿಕೆ ಮೆರವಣಿಗೆ ಮತ್ತು ಭೀಮನಡಿಗೆ ಪಥಸಂಚಲನವನ್ನು ಚಿತ್ತಾವಲಿ ಚೌಕದಿಂದ ಪ್ರಾರಂಭವಾಗಿ ಜನತಾ ಬಜಾರ, ಭುವನೇಶ್ವರಿ ಚೌಕ, ಡಾ. ಬಿ.ಆರ್. ಅಂಬೇಡ್ಕರ ಸರ್ಕಲ್, ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್ ಮಾರ್ಗವಾಗಿ ಬಜಾಜ್ ಕಲ್ಯಾಣ ಮಂಟಪದಲ್ಲಿ ಮುಕ್ತಾಯಗೊಳಿಸತಕ್ಕದ್ದು. 3) ಮಾರ್ಗ ನಕ್ಷೆಯ ಪ್ರಕಾರ ಭೀಮನಡಿಗೆ ಪಥಸಂಚಲನ ನಡೆಸತಕ್ಕದ್ದು. 4) ಬಜಾಜ್ ಕಲ್ಯಾಣ ಮಂಟಪದ ಆವರಣದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಬಹಿರಂಗ ಸಭೆ ನಡೆಸಲು ಕಲ್ಯಾಣ ಮಂಟಪದ ಮಾಲಿಕರಿಂದ/ವ್ಯಸ್ಥಾಪಕರಿಂದ ಒಪ್ಪಿಗೆ ಪತ್ರ ಪಡೆದುಕೊಳ್ಳುವುದು. 5) ಯಾವುದೇ ಸಾರ್ವಜನಿಕ ಸ್ಥಳಗಳು/ಬೀದಿಗಳಲ್ಲಿ ಯಾವುದೇ ಭಾಷಣಗಳು/ ಕಾರ್ಯ ಕ್ರಮಗಳನ್ನು ಆಯೋಜಿಸಬಾರದು. 6) ಕಾರ್ಯಕ್ರಮದ ಆಯೋಜಕರು, ಭಾಗವಹಿಸುವವರು, ಆಹ್ವಾನಿತರು, ಯಾವುದೇ ರಾಜಕೀಯ ಭಾಷಣಗಳನ್ನು ಮಾಡಬಾರದು ಮತ್ತು ಯಾವುದೇ ಪ್ರಚೋದನಕಾರಿ ಭಾಷೆ ಅಥವಾ ಘೋಷಣೆಗಳನ್ನು ಬಳಸಬಾರದು. 7) ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳವ ಹಾಗೂ ಯಾವುದೇ ಅಹಿತಕರ ಘಟನೆಗಳನ್ನು ಸಂಭವಿಸದಂತೆ ನೋಡಿಕೊಳ್ಳುವ 10 ಜನ ವ್ಯಕ್ತಿಗಳು / ನಾಯಕರು/ ಸಂಘಟಕರ ಪಟ್ಟಿಯನ್ನು ಅವರ ಹೆಸರು, ವಿಳಾಸ, ಹಾಗೂ ದೂರವಾಣಿ ಸಂಖ್ಯೆಯೊಂದಿಗೆ ಪೊಲೀಸ್ ಇಲಾಖೆಗೆ ನೀಡಬೇಕು. 8) ಧ್ವಜಗಳು, ಬ್ಯಾನರುಗಳು, ಬಂಟಿಂಗಳನ್ನು ಅಳವಡಿಸಲು ಸಕ್ಷಮ ಅಧಿಕಾರಿಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಮತ್ತು ಬ್ಯಾನರ್ ಹಾಗೂ ಬಂಟಿಂಗಳಲ್ಲಿ ಯಾವುದೇ ಪ್ರಚೋದನಾತ್ಮಕ ಘೋಷಣೆಗಳನ್ನು ಮುದ್ರಿಸಬಾರದು. 9) ಸಮಾರಂಭದ ಆಯೋಜಕರು ಮತ್ತು ಭಾಗವಹಿಸುವವರು ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಸ್ಥಳಿಯ ಆಡಳಿತದೊಂದಿಗೆ ಸಹಕರಿಸಬೇಕು. 10) ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುಂಜಾಗೃತ ಕ್ರಮ ವಹಿಸುವುದು.

ಪ್ರಸ್ತುತ ಅನುಮತಿಯನ್ನು ಒಂದು ಬಾರಿಯ ಕ್ರಮವಾಗಿ ಮಾತ್ರ ನೀಡಿ ಆದೇಶಿಸಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!