ಚಿತ್ತಾಪುರ-ದಿಗ್ಗಾಂವ ಮಾರ್ಗಮಧ್ಯೆದ ದಿಗ್ಗಾಂವ ಕ್ರಾಸ್ ಕೆಸಿಎಲ್ ಫ್ಯಾಕ್ಟರಿ ಹತ್ತಿರ ಸಾರಿಗೆ ಬಸ್ ನಿಲ್ಲಿಸುವಂತೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಸ್ ನಿಲ್ದಾಣದಿಂದ ದಿಗ್ಗಾಂವ ಗ್ರಾಮಕ್ಕೆ ಹೋಗಿಬರುವ ಎಲ್ಲ ಸಾರಿಗೆ ಬಸ್‌ಗಳನ್ನು ಮಾರ್ಗ ಮದ್ಯೆದ ದಿಗ್ಗಾಂವ ಕ್ರಾಸ್, ಕೆಸಿಎಲ್ ಫ್ಯಾಕ್ಟರಿ ಹತ್ತಿರ ನಿಲ್ಲಿಸುವ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತ್ ತಾಂಡೂರಕರ್ ಬಸ್ ಘಟಕ ವ್ಯವಸ್ಥಾಪಕರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.
ಚಿತ್ತಾಪುರ ಬಸ್ ನಿಲ್ದಾಣದಿಂದ ದಿಗ್ಗಾಂವ ಗ್ರಾಮಕ್ಕೆ ನಿತ್ಯ ಸಂಚರಿಸುವ ಸಾರಿಗೆ ಬಸ್‌ಗಳನ್ನು ದಿಗ್ಗಾಂವ ಕ್ರಾಸ್ ಕೆಸಿಎಲ್ ಫ್ಯಾಕ್ಟರಿ ಹತ್ತಿರ ನಿಲ್ಲಿಸುವ ಕ್ರಮ ಕೈಗೊಳ್ಳಬೇಕು. ಈ ಭಾಗದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣಗೊಂಡಿದ್ದ 320 ಮನೆಗಳಲ್ಲಿ ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಹೀಗಾಗಿ ಶಾಲಾ ಕಾಲೇಜಿನ ಮಕ್ಕಳು ಸ್ಥಳದಲ್ಲಿ ನಿಂತು ಕೈ ಮಾಡಿದರೂ ಬಸ್‌ಗಳು ನಿಲ್ಲುತ್ತಿಲ್ಲ ಇದರಿಂದ ವಿದ್ಯಾರ್ಥಿಗಳು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಅವರ ಶಿಕ್ಷಣದ ಮೇಲೆ ಕೊಡಲಿ ಪೆಟ್ಟು ಬೀಳುತ್ತಿದೆ. ಅಲ್ಲದೇ ಹಿರಿಯ ನಾಗರಿಕರು, ಮಹಿಳೆಯರು ಸೇರಿದಂತೆ ಕಾರ್ಮಿಕರಿಗೆ ಕೂಡ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ಆದ್ದರಿಂದ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಹಾಗೂ ಮಹಿಳೆಯರ ಹಿತದೃಷ್ಟಿಯಿಂದ ಕೂಡಲೇ ದಿಗ್ಗಾಂವ ಕ್ರಾಸ್ ಕೆಸಿಎಲ್ ಫ್ಯಾಕ್ಟರಿ ಹತ್ತಿರ ಸಾರಿಗೆ ಬಸ್‌ಗಳನ್ನು ನಿಲ್ಲಿಸುವ ಕ್ರಮ ಕೈಗೊಂಡು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದಾಗ ಘಟಕ ವ್ಯವಸ್ಥಾಪಕ ಜಿ.ಬಿರಾದಾರ ಅವರು ತಕ್ಷಣ ಸ್ಪಂದಿಸುವ ಮೂಲಕ ಅಗತ್ಯ ಕ್ರಮ ಕೈಗೊಂಡು ಆ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳು ಚಾಲಕ ನಿರ್ವಾಹಕರಿಗೆ ಸೂಚಿಸಲಾಗುವುದು ಎಂದು ಹೇಳಿದರು.

