ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ದಿಗ್ಗಾಂವ ಮೆಹೇಬೂಬ್ ಸುಬಾನಿ ದರ್ಗಾ ಉರುಸ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ಹಜರತ್ ಮೆಹೇಬೂಬ್ ಸುಬಾನಿ ರಹಮತುಲ್ಲಾ ಅಲೈಹಿ ದರ್ಗಾದ ಉರುಸ್ ಮಹೋತ್ಸವದ ಧಾರ್ಮಿಕ ಸಭೆಯು ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಯಿತು.
ಸಭೆಯಲ್ಲಿ ಆಶೀರ್ವಚನ ನೀಡಿದ ಪಂಚಗೃಹ ಹಿರೇಮಠದ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ, ದರ್ಗಾ ಚಿಕ್ಕದಾಗಿದ್ದರೂ ಅದರ ಶಕ್ತಿ ಅಪಾರವಾದದ್ದು. ಹಿಂದೂ-ಮುಸ್ಲಿಮರು ಒಂದೇ ಎಂಬುದು ನಮ್ಮ ಹಿರಿಯರ ಮಾತಾಗಿದೆ. ನಮ್ಮೂರಲ್ಲಿ ಶಂಭುಲಿಂಗನ ಜಾತ್ರೆಯಾಗಲಿ, ದರ್ಗಾ ಉರುಸ್ ಆಗಲಿ ಅಥವಾ ಮಠದ ಕಾರ್ಯಕ್ರಮವೇ ಇರಲಿ, ಗ್ರಾಮಸ್ಥರೆಲ್ಲರೂ ಒಟ್ಟಾಗಿ ವಿಜೃಂಭಣೆಯಿಂದ ನೆರವೇರಿಸುತ್ತೇವೆ. ಇಡೀ ತಾಲೂಕಿನಲ್ಲಿ ಶಾಂತಿಗೆ ಹೆಸರಾದ ಗ್ರಾಮವೆಂದರೆ ಅದು ದಿಗ್ಗಾಂವ ಎಂದು ಹೆಮ್ಮೆಯಿಂದ ನುಡಿದರು.
ದರ್ಗಾದ ಸಾಹೇಬರು ಮಾತನಾಡಿ, ಈ ಕಾರ್ಯಕ್ರಮವು ನಮ್ಮ ತಾಲೂಕಿನ ‘ಗಂಗಾ-ಜಮುನಾ ತಹಜೀಬ್’ (ಸೌಹಾರ್ದ ಸಂಸ್ಕೃತಿ) ಸಾರುವ ಅತ್ಯುತ್ತಮ ಉದಾಹರಣೆಯಾಗಿದೆ” ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಂಚಗಾರಹಳ್ಳಿಯ ಮಲ್ಲಯ್ಯ ಸ್ವಾಮಿ ಅವರು, ಸಮಾಜದಲ್ಲಿ ಪ್ರತಿಯೊಬ್ಬರೂ ಮಾನವೀಯತೆ, ದಯೆ, ಕರುಣೆ ಹಾಗೂ ಪರಸ್ಪರ ಸಹಿಷ್ಣುತೆಯನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀಮಂತ ಗುತ್ತೇದಾರ, ಸಿದ್ದನಗೌಡ ಪಾಟೀಲ, ಮಲ್ಲಿನಾಥ ಪಾಟೀಲ, ಶೈಲು ಪಾಟೀಲ್, ಶರಣು ಉಡಗಿ, ಇಬ್ರಾಹಿಂ ಕೋಳದ್ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.

