ದಿಗ್ಗಾಂವ ಶ್ರೀಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಶಿವಲಿಂಗದ ಮೇಲೆ ಕಾಲಿಟ್ಟಿದ್ದು ಸಮರ್ಥಿಸಿಕೊಂಡ ಶ್ರೀಗಳಿಗೆ ಬುದ್ಧಿ ಭ್ರಮಣೆ: ಅಯ್ಯಪ್ಪ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಇತ್ತೀಚೆಗೆ ತಾಲೂಕಿನ ದಿಗ್ಗಾoವ ಶಾಖಾ ಮಠವಾದ ಸೇಡಂ ತಾಲೂಕಿನ ಕಲಕಂಬ ಗ್ರಾಮದಲ್ಲಿ ಈಶ ಬಸವೇಶ್ವರ ದೇವಾಲಯದ ಶಿವಲಿಂಗವನ್ನು ಪ್ರಾಣ ಪ್ರತಿಷ್ಠಾಪನೆ ಮಾಡುವಾಗ ದಿಗ್ಗಾoವ ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ಧವೀರ ಶಿವಾಚಾರ್ಯರು ಶಿವಲಿಂಗದ ಮೇಲೆ ತಮ್ಮ ಕಾಲುಗಳನ್ನು (ಪಾದುಕೆಗಳು) ಇರಿಸಿ ಹಾಲಿನ ಅಭಿಷೇಕವನ್ನು ಮಾಡಿಸಿಕೊಳ್ಳುವ ದೃಶ್ಯ ಅದನ್ನು ಧರ್ಮಶಾಸ್ತ್ರ ಗ್ರಂಥಗಳ ಪ್ರಕಾರವೇ ಮಾಡಿದ್ದೇನೆಂದು ಸಮರ್ಥಿಸಿಕೊಂಡಿರುವುದನ್ನು ನೋಡಿದರೆ ಇವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದೆನಿಸುತ್ತದೆ ಎಂದು ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ತೀವ್ರವಾಗಿ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿದ ಅವರು, ಶ್ರೀಗಳ ಈ ವಿರೂಪ ಕಾರ್ಯದ ದೃಶ್ಯವು ಹಿಂದೂ ಧಾರ್ಮಿಕ ಭಾವನೆಗಳಿಗೆ ಹಾಗೂ ಶಿವಭಕ್ತರಿಗೆ ಅಪಮಾನ ಗೊಳಿಸುವಂತಾಗಿದೆ. ಶ್ರೀಗಳ ಈ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತೇನೆ, ಏಕೆಂದರೆ ಶಿವಲಿಂಗವು ಸಾಕ್ಷಾತ್ ಶಿವನ ಸ್ವರೂಪಿಯಾಗಿದ್ದು, ಹಿಂದೂ ಧರ್ಮಿಯರು ಶಿವಲಿಂಗವನ್ನು ಪವಿತ್ರ ಹಾಗೂ ಪೂಜ್ಯ ಭಾವನೆಯಿಂದ ಪೂಜಿಸುತ್ತಾರೆ. ಶಿವನು ತನ್ನ ನಿಜ ರೂಪವನ್ನು ಪ್ರಥಮ ಬಾರಿಗೆ ಮಾಘ ಮಾಸದ ಕರಾಳದ 14 ನೇ ದಿನದಂದು ತಾನು ಲಿಂಗ ರೂಪದಲ್ಲಿ ಪ್ರತ್ಯಕ್ಷನಾಗಿದ್ದಾನೆಂದು, ಮತ್ತು ಅದೇ ದಿನವನ್ನೆ ಮಹಾಶಿವರಾತ್ರಿಯಂದು ಕೋಟ್ಯಾಂತರ ಭಗವಂತ ಶಿವನ ಆರಾಧಕರು ಅಂದು ಉಪವಾಸದಿಂದ ಹಗಲು ರಾತ್ರಿ ನಿದ್ರೆ ಇಲ್ಲದೆ ಇಡೀ ದಿನ ಜಾಗರಣೆ ಮಾಡಿ ಶಿವಲಿಂಗವನ್ನು ಭಕ್ತಿಯಿಂದ ಪೂಜಿಸಲ್ಪಡುತ್ತಾರೆ ಎಂದು ತಿಳಿಸಿದ್ದಾರೆ.
ಎಲ್ಲಾ ದೇವರುಗಳಿಗಿಂತ ಭಿನ್ನವಾಗಿ ಇಡೀ ವಿಶ್ವದಲ್ಲಿ ಶಿವನನ್ನು ಭಕ್ತರು ಎರಡು ರೂಪದಲ್ಲಿ ಪೂಜಿಸುತ್ತಾರೆ. ಒಂದು ಚಲನೆಯ ವಿಗ್ರಹ ರೂಪದಲ್ಲಿ ಮತ್ತು ಲಿಂಗದ ಸ್ಥಿರ ಆಕಾರದಲ್ಲಿ, ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ ಶಿವಲಿಂಗವನ್ನು ಭಗವಂತರಾದ ಬ್ರಹ್ಮ, ವಿಷ್ಣು, ಶ್ರೀರಾಮ, ಶ್ರೀ ಕೃಷ್ಣ, ಪರಶುರಾಮ, ಶನಿ ಹಾಗೂ ಅನೇಕ ಋಷಿ ಮುನಿಗಳು ಪೂಜಿಸಲ್ಪಟ್ಟಿರುವ ಇಂಥಹ ಪವಿತ್ರ ಹಿನ್ನೆಲೆ ಇರುವ ಶಿವಲಿಂಗದ ಮೇಲೆ ತಮ್ಮ ಎರಡು ಕಾಲುಗಳನ್ನೂ ಲಿಂಗದ ಮೇಲೆ ಇರಿಸಿ ಹಾಲಿನಿಂದ ಗುರುವಿನ ಪಾದಕಗಳೆಂದು ತನ್ನ ಕಾಲುಗಳನ್ನೆ ಅಭಿಷೇಕ ಮಾಡಿಕೊಳ್ಳುವ ವಿಕೃತ ರೂಪದ ದೃಶ್ಯಗಳು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣ ಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು ನೋಡಿದರೆ ಇದು ಶ್ರೀಗಳು ಬಹು ದಿನಗಳಿಂದಲೂ ಉದ್ದಟತನದಿಂದ ಮಾಡಿಕೊಂಡು ಬಂದಿರುವ ಗೊಡ್ಡು ಸಂಪ್ರದಾಯ ಹಾಗೂ ಇದು ಒಂದು ಘೋರ ಅಪರಾಧವೂ ಆಗಿದೆ ಎಂದು ಹೇಳಿದ್ದಾರೆ.
ಶ್ರೀಗಳ ಕೃತ್ಯಕ್ಕೆ ಭಗವಂತ ಆ ಶಿವನು ಕೂಡ ಇವರನ್ನು ಕ್ಷಮಿಸಲಾರ. ಕೂಡಲೇ ಶ್ರೀಗಳು ಶಿವ ಭಕ್ತರಿಗೆ ಆದ ಅಪಮಾನ ಹಾಗೂ ನೋವಿನ ಬಗ್ಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು, ಮತ್ತು ಇವರ ಮೇಲೆ ಕೂಡಲೆ ಸರ್ಕಾರ ಎಚ್ಚೆತ್ತುಕೊಂಡು ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿರುವ ಮಠದ ಈ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಕರ್ನಾಟಕ ಸರ್ಕಾರದ ಗೃಹ ಇಲಾಖೆಯು ತನಿಖೆಗೆ ಒಳಪಡಿಸಿ ಕಾನೂನು ಪ್ರಕಾರ ಶ್ರೀಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.