ಹಿಂದೂ ಸಮಾವೇಶದಲ್ಲಿ ತಾಂತ್ರಿಕ ಕಾರಣಗಳಿಂದ ಕೆಲವು ಶರಣರ ಭಾವಚಿತ್ರಗಳು ಬಿಟ್ಟುಹೋಗಿರುವುದಕ್ಕೆ ಕ್ಷಮೆಯಾಚನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಜರುಗಿದ ಹಿಂದೂ ಸಮಾವೇಶದಲ್ಲಿ ತಾಂತ್ರಿಕ ಕಾರಣಗಳಿಂದ ಕೆಲವು ಶರಣರ ಭಾವಚಿತ್ರಗಳು ಬಿಟ್ಟುಹೋಗಿರುವುದಕ್ಕೆ ಸಂಬಂಧಿಸಿದಂತೆ, ಹಿಂದೂ ಸಮ್ಮೇಳನ ಆಯೋಜನೆ ಸಮಿತಿಯ ಕಾರ್ಯದರ್ಶಿ ಮೈಪಾಲ್ ಮೂಲಿಮನಿ ಅಧಿಕೃತ ಸ್ಪಷ್ಟನೆ ನೀಡಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಸಮಾವೇಶದ ಅಂಗವಾಗಿ ಪೂಜ್ಯ ಸಾಧು-ಸಂತರು ಹಾಗೂ ಶರಣರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಭಾವಚಿತ್ರಗಳ ಮುದ್ರಣ ಮತ್ತು ಅಂಟಿಸುವ ವೇಳೆ ಸಂಭವಿಸಿದ ಅಚಾತುರ್ಯದಿಂದಾಗಿ ಕೆಲವು ಶರಣರ ಭಾವಚಿತ್ರಗಳು ಕೈಬಿಟ್ಟು ಹೋಗಿದ್ದವು. ಈ ಕುರಿತು ತಕ್ಷಣ ಪ್ರತಿಕ್ರಿಯಿಸಿರುವ ಕಾರ್ಯದರ್ಶಿಯವರು, ಶನಿವಾರ ಕಾರ್ಯಕ್ರಮದ ಅಂತ್ಯದಲ್ಲಿ ನಡೆದ ವಂದನಾರ್ಪಣೆಯ ಅವಧಿಯಲ್ಲಿಯೇ ಈ ತಪ್ಪಿನ ಬಗ್ಗೆ ನಾನು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಶರಣರು ಯಾವುದೇ ಒಂದು ಸಣ್ಣ ಅಥವಾ ದೊಡ್ಡ ಸಮುದಾಯಕ್ಕೆ ಸೀಮಿತವಾದವರಲ್ಲ, ಅವರು ಇಡೀ ಮನುಕುಲಕ್ಕೆ ದಾರಿದೀಪವಾದವರು, ಪ್ರಿಂಟಿಂಗ್ ದೋಷದಿಂದ ಈ ಪ್ರಮಾದ ಸಂಭವಿಸಿದೆ. ಇದರಿಂದ ಯಾವುದೇ ಸಮುದಾಯದವರ ಭಾವನೆಗಳಿಗೆ ನೋವಾಗಿದ್ದರೆ ನಾವು ಕ್ಷಮೆ ಕೇಳುತ್ತೇವೆ ಎಂದು ಅವರು ವಿನಂತಿಸಿದ್ದಾರೆ.

