ಹೊಸ್ಸೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ | ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ: ದೇವಪ್ಪ ನಂದೂರಕರ್

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಇಂದು ಖಾಸಗಿ ಶಾಲೆಗಳಿಗೆ ಸವಾಲು ಹಾಕುವಂತಿದೆ. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಶಾಲೆಯ ಬಲವರ್ಧನೆಗೆ ಮುಂದಾಗಬೇಕು ಎಂದು ನಿವೃತ್ತ ಶಿಕ್ಷಕ ದೇವಪ್ಪ ನಂದೂರಕರ್ ಅವರು ಕರೆ ನೀಡಿದರು.

ತಾಲೂಕಿನ ಹೊಸ್ಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ 8ನೇ ತರಗತಿ ಮಕ್ಕಳ ಬೀಳ್ಕೊಡುಗೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ವರ್ಷ ಹೊಸೂರು ಶಾಲೆಯಲ್ಲಿ ಕನಿಷ್ಠ 50ಕ್ಕೂ ಹೆಚ್ಚು ಹೊಸ ಮಕ್ಕಳ ದಾಖಲಾತಿ ಮಾಡಿಸುವ ಗುರಿ ಹೊಂದೋಣ ಎಂದು ಪೋಷಕರಲ್ಲಿ ಮನವಿ ಮಾಡಿದರು.

8ನೇ ತರಗತಿಯ ವಿದ್ಯಾರ್ಥಿಗಳು ಜ್ಞಾನದ ಸಂಕೇತವಾದ ದೀಪವನ್ನು ತಮ್ಮ ಕಿರಿಯರಿಗೆ (7ನೇ ತರಗತಿ) ಹಸ್ತಾಂತರಿಸುವ ಮೂಲಕ ಶೈಕ್ಷಣಿಕ ಪರಂಪರೆಯನ್ನು ಮುಂದುವರಿಸಲು ಹಾರೈಸಿದರು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್‌ಎಲ್‌ಎಫ್ ಶಿಕ್ಷಕರಾದ ಫತೃಬಿ ಮಂಜೂರಬಾಬಾ ಹಾಗೂ ಬುಗ್ಗಪ್ಪ ಭೀಮಣ್ಣ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಇದೇ ಶಾಲೆಯಲ್ಲಿ ಓದಿ ಇಂದು ಪೊಲೀಸ್, ಶಿಕ್ಷಣ, ನ್ಯಾಯಾಂಗ, ಆರೋಗ್ಯ ಹಾಗೂ ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿರುವ 50ಕ್ಕೂ ಹೆಚ್ಚು ಸಾಧಕ ಹಳೆಯ ವಿದ್ಯಾರ್ಥಿಗಳನ್ನು ಮುಖ್ಯಗುರು ಜಗನ್ನಾಥ ಬಡಿಗೇರ ಅವರು ಸನ್ಮಾನಿಸಿದರು. ಅಮೀನಸಾಬ್ ಹವಾಲ್ದಾರ್, ಅಬ್ದುಲ್ ರಹಮಾನ್ ರುಸ್ತುಂ, ಮೈಬೂಬ ಹವಾಲ್ದಾರ್, ಮಲ್ಲಿಕಾರ್ಜುನ ಕಣಸೂರ ಸೇರಿದಂತೆ ಹಲವು ಗಣ್ಯರು ಗೌರವ ಸ್ವೀಕರಿಸಿದರು.

ಮಕ್ಕಳಿಂದ ಪ್ರದರ್ಶನಗೊಂಡ ನೃತ್ಯ, ಕಿರುನಾಟಕ ಹಾಗೂ ಅಭಿನಯ ಗೀತೆಗಳು ಮಧ್ಯರಾತ್ರಿ 12.30ರ ವರೆಗೆ ನೆರೆದಿದ್ದ ಅಪಾರ ಸಂಖ್ಯೆಯ ಜನರನ್ನು ಮಂತ್ರಮುಗ್ಧರನ್ನಾಗಿಸಿದವು. ಎಸ್‌ಡಿಎಂಸಿ ಅಧ್ಯಕ್ಷ ಸಂಜೀವ ರೆಡ್ಡಿ ಜಾಕನಳ್ಳಿ ಹಾಗೂ ಈಶಣ್ಣ ಸಜ್ಜನರ ಬಳಗ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿ ಯಶಸ್ವಿಗೊಳಿಸಿದರು.

ಪ್ರಮುಖರಾದ ಭೀಮಣ್ಣ ಶೀಭಾ, ಗೌಸೋದೀನ್ ರುಸ್ತುಂ, ವಿಜಯಕುಮಾರ್ ಭಂಕಲಗಿ, ಸಿಆರ್‌ಪಿ ಶಿವಾನಂದ್ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಿಲ್ಪಾ ಮತ್ತು ಮಲ್ಲು ಶೀಭಾ ನಿರೂಪಿಸಿದರು, ಭೀಮರಾಯ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!