ಸೆಮಿಕಂಡಕ್ಟರ್‌: ಪಾಲುದಾರಿಕೆಗೆ ಮಲೇಷ್ಯಾದ ಪೆನಾಂಗ್‌ ರಾಜ್ಯದ ಒಲವು | ಜಾಗತಿಕ ಸೆಮಿಕಂಡಕ್ಟರ್‌ ಕ್ಷೇತ್ರದ ತಂತ್ರಜ್ಞರ ಅಗತ್ಯವನ್ನು ಕರ್ನಾಟಕ ಮತ್ತು ಪೆನಾಂಗ್‌ ಜಂಟಿಯಾಗಿ ಈಡೇರಿಸಲು ಸಾಧ್ಯ: ಸಚಿವ ಪ್ರಿಯಾಂಕ್‌ ಖರ್ಗೆ ಅಭಿಮತ

ನಾಗಾವಿ ಎಕ್ಸಪ್ರೆಸ್ 

ಬೆಂಗಳೂರು: ಸೆಮಿಕಂಡಕ್ಟರ್, ಡೀಪ್‌ಟೆಕ್, ಬಾಹ್ಯಾಕಾಶ ತಂತ್ರಜ್ಞಾನ, ಸ್ಮಾರ್ಟ್ ಸಿಟಿ, ಕೌಶಲ ಮತ್ತು ನಾವೀನ್ಯತೆ-ನೇತೃತ್ವದ ಕೈಗಾರಿಕಾ ಬೆಳವಣಿಗೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರದ ಜೊತೆಗಿನ ಸಹಯೋಗದ ಸಾಧ್ಯತೆಗಳ ಕುರಿತು ಮಲೇಷ್ಯಾದ ಪೆನಾಂಗ್‌ ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗವು ಮಂಗಳವಾರ ಇಲ್ಲಿ ಫಲಪ್ರದ ಸಭೆ ನಡೆಸಿತು.

ಪೆನಾಂಗ್‌ನ ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ದಿಯೊ ಅವರ ನೇತೃತ್ವದಲ್ಲಿನ ಉನ್ನತ ಮಟ್ಟದ ನಿಯೋಗದಲ್ಲಿ ಪೆನಾಂಗ್ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಪೆನಾಂಗ್ ದ್ವೀಪ ನಗರ ಮಂಡಳಿಯ ಪ್ರತಿನಿಧಿಗಳು ಮತ್ತು ಚೆನ್ನೈನ ಮಲೇಷ್ಯಾದ ಕಾನ್ಸುಲೇಟ್ ಜನರಲ್‌ನ ಅಧಿಕಾರಿಗಳು ಇದ್ದರು.

ನಿಯೋಗವು ಕರ್ನಾಟಕ ಸರ್ಕಾರದ ಐಟಿ,ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್. ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿತು.

ಸಾಫ್ಟ್‌ವೇರ್, ಸಂಶೋಧನೆ ಹಾಗೂ ಅಭಿವೃದ್ಧಿ, ಚಿಪ್ ವಿನ್ಯಾಸ, ನವೋದ್ಯಮ, ಡೀಪ್‌ಟೆಕ್ ಹಾಗೂ ಪ್ರತಿಭಾನ್ವಿತ ತಂತ್ರಜ್ಞರ ಲಭ್ಯತೆ ಮತ್ತಿತರ ವಲಯಗಳಲ್ಲಿನ ಸಹಯೋಗಕ್ಕೆ ಸಂಬಂಧಿಸಿದ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವ (ಎಂಒಯು) ನಿಟ್ಟಿನಲ್ಲಿ ಚರ್ಚೆ ಮುಂದುವರೆಸಲು ಪೆನಾಂಗ್‌ ನಿಯೋಗವು ಆಸಕ್ತಿ ವ್ಯಕ್ತಪಡಿಸಿದೆ. ಸಮಾಲೋಚನೆಗಳನ್ನು ಮುಂದುವರೆಸಲು ಕರ್ನಾಟಕ ರಾಜ್ಯ ಸರ್ಕಾರವೂ ಉತ್ಸುಕತೆ ವ್ಯಕ್ತಪಡಿಸಿದೆ.

ಸಭೆಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ತಂತ್ರಜ್ಞಾನ ಕ್ಷೇತ್ರಗಳಲ್ಲಿನ ರಾಜ್ಯದ ಪ್ರಗತಿಪಥದ ಮಾದರಿಯು- ಶಿಕ್ಷಣ, ಕೌಶಲ, ನವೋದ್ಯಮ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉದ್ಯಮ ವಲಯಗಳು ಸಂಘಟಿತ ರೀತಿಯಲ್ಲಿ ಕೆಲಸ ಮಾಡುವುದರ ಮೇಲೆ ನಿರ್ಮಿಸಲ್ಪಟ್ಟಿದೆ. ಹಾರ್ಡ್‌ವೇರ್ ಮತ್ತು ಸೆಮಿಕಂಡಕ್ಟರ್‌ ತಯಾರಿಕೆ ವಲಯದಲ್ಲಿ ಸರಿಸಾಟಿಯಿಲ್ಲದ ಸಾಧನೆಯನ್ನು ಪೆನಾಂಗ್‌ ಸಾಧಿಸಿದೆ. ಕರ್ನಾಟಕವು ಚಿಪ್ ವಿನ್ಯಾಸ, ಸಾಫ್ಟ್‌ವೇರ್ ಮತ್ತು ಅತ್ಯಾಧುನಿಕ ಎಂಜಿನಿಯರಿಂಗ್ ಪ್ರತಿಭಾನ್ವಿತರ ನೆಲೆಯಾಗಿ ಗಮನಾರ್ಹ ಮುನ್ನಡೆ ಸಾಧಿಸಿದೆ. ಜಾಗತಿಕ ಸೆಮಿಕಂಡಕ್ಟರ್‌ ಕ್ಷೇತ್ರದ ತಂತ್ರಜ್ಞರ ಅಗತ್ಯವನ್ನು ಕರ್ನಾಟಕ ಮತ್ತು ಪೆನಾಂಗ್‌ ಜೊತೆಯಾಗಿ ಈಡೇರಿಸಲು ಸಾಧ್ಯವಿದೆ ಎಂದು ಹೇಳಿದರು.

ಜಾಗತಿಕ ಸೆಮಿಕಂಡಕ್ಟರ್‌ ಉತ್ಪಾದನೆಯಲ್ಲಿ ಶೇಕಡ 7.5ರಷ್ಟು ಕೊಡುಗೆ ನೀಡುತ್ತಿರುವ ಪೆನಾಂಗ್‌, ಅಡ್ವಾನ್ಸಡ್‌ ಸೆಮಿಕಂಡಕ್ಟರ್ ಮತ್ತು ಐಸಿ ಚಿಪ್ ವಿನ್ಯಾಸ ಎಂಜಿನಿಯರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿತು.

ಇಂಟೆಲ್, ಎನ್‌ವಿಡಿಯಾ, ಆ್ಯಪಲ್‌ ಮತ್ತು ಎಎಂಡಿ-ಯಂತಹ ಜಾಗತಿಕ ಕಂಪನಿಗಳ ಜೊತೆಗೆ ಕೆಲಸ ಮಾಡುವ ಸೆಮಿಕಂಡಕ್ಟರ್ ವಿನ್ಯಾಸ ಪ್ರತಿಭಾನ್ವಿತರನ್ನು ಗಮನಾರ್ಹ ಸಂಖ್ಯೆಯಲ್ಲಿ ಹೊಂದಿರುವ ಕರ್ನಾಟಕದ ಜೊತೆಗಿನ ಸಹಯೋಗಕ್ಕೆ ಪೆನಾಂಗ್‌ ನಿಯೋಗವು ಹೆಚ್ಚು ಒಲವು ವ್ಯಕ್ತಪಡಿಸಿದೆ. ಚಿಪ್‌ ಡಿಸೈನ್‌ ಮತ್ತು ಅಡ್ವಾನ್ಸಡ್‌ ಎಂಜಿನಿಯರಿಂಗ್‌ ಕ್ಷೇತ್ರಗಳಲ್ಲಿ ಉದ್ಯಮ ಹಾಗೂ ಉನ್ನತ ಶೈಕ್ಷಣಿಕ ಸಂಸ್ಥೆಗಳ ಪಾಲುದಾರಿಕೆ, ಪ್ರತಿಭಾನ್ವಿತರ ವಿನಿಮಯ ಕಾರ್ಯಕ್ರಮ, ಸೆಮಿಕಂಡಕ್ಟರ್‌ ಉದ್ಯಮದ ಅಗತ್ಯ ಈಡೇರಿಸಲು ಜಂಟಿ ಕೌಶಲ ಮತ್ತು ಪ್ರಮಾಣಪತ್ರ ಕಾರ್ಯಕ್ರಮ ರೂಪಿಸುವುದರ ಬಗ್ಗೆಯೂ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.

Spread the love

Leave a Reply

Your email address will not be published. Required fields are marked *

error: Content is protected !!