ಈಡಿಗ ಸಮಾಜದ ಪಾದಯಾತ್ರೆ ಹಾಗೂ ಜಾಗೃತಿ ಸಭೆ | ಈಡಿಗ ಸಮಾಜದ ಹೋರಾಟದ ಕಿಚ್ಚು ಕರದಾಳದಿಂದ ಆರಂಭ: ಪೂಜಾರಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಈಡಿಗ ಸಮಾಜದ ಹೋರಾಟದ ಕಿಚ್ಚು ಡಾ. ಪ್ರಣವಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ತಾಲೂಕಿನ ಕರದಾಳ ಗ್ರಾಮದಿಂದ ಪ್ರಾರಂಭವಾಗಿದೆ ಎಂದು ಉಡುಪಿ ಚಿಕ್ಕಮಂಗಳೂರು ಲೋಕಸಭೆ ಕ್ಷೇತ್ರದ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಕರದಾಳ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಐತಿಹಾಸಿಕ ಪಾದಯಾತ್ರೆ ಹಾಗೂ ಸಮಾಜ ಜಾಗೃತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಡಿಗ ಸಮಾಜದವು ತೀರ ಹಿಂದುಳಿದ ಸಮಾಜವಾಗಿದ್ದು, ಸ್ವಾತಂತ್ರ್ಯ ಸಿಕ್ಕು 80 ವರ್ಷಗಳು ಕಳೆದರೂ ಕೂಡಾ ನಮ್ಮ ಸಮಾಜವು ಇನ್ನೂ ತಮ್ಮ ಹಕ್ಕಿಗಾಗಿ ಹೋರಾಟವನ್ನು ಮಾಡುವ ಅನಿವಾರ್ಯತೆ ಎದುರಾಗಿದ್ದು, ಕರದಾಳ ಶಕ್ತಿ ಪೀಠದ ಡಾ. ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಕರದಾಳ ದಿಂದ ಬೆಂಗಳೂರು ವರೆಗಿನ 700 ಕಿ.ಮೀ ಪಾದಯಾತ್ರೆಯ ಮೂಲಕ ನಮ್ಮ ಸಮಾಜದ ಹೋರಾಟದ ಕಿಚ್ಚು ಪ್ರಾರಂಭವಾಗಿದೆ, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಈಡಿಗ ಸಮಾಜವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ಧೋರಣೆಯ ವಿರುದ್ದ ಹೋರಾಟ ಮಾಡದಿದ್ದರೆ ನ್ಯಾಯ ಸಿಗುತ್ತದೆ ಎನ್ನುವ ಭ್ರಮೆಯಿಂದ ಹೊರಬಂದು ರಾಜಕೀಯ ರಹಿತವಾದ ಸಮಾಜ ಸಂಘಟನೆಯ ಮೂಲಕ ಸಮಾಜಕ್ಕೆ ನ್ಯಾಯ ಒದಗಿಸಲು ಹೋರಾಟವನ್ನು ಮಾಡೋಣ ಎಂದು ಕರೆ ನೀಡಿದರು.
ಪಾದಯಾತ್ರೆ ನೇತೃತ್ವ ವಹಿಸಿದ್ದ ಡಾ.ಪ್ರಣವಾನಂದ ಮಹಾಸ್ವಾಮಿಗಳು ಮಾತನಾಡಿ, ಈಡಿಗ ಸಮಾಜ ಒಡೆಯುವ ಕೆಲಸ ಮಾಡಿದರೆ ನಿಮ್ಮ ಕೈ ನೀವೇ ಸುಟ್ಟುಕೊಳ್ಳುವಿರಿ ಎಂದು ನೇರವಾಗಿ ಸಂದೇಶ ನೀಡಿದರು.
ನಾನು ಕಳೆದ ಬಾರಿ ಪಾದಯಾತ್ರೆಯನ್ನು ಕೈಗೊಂಡಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆಗ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಈಗ ರಾಜ್ಯದಲ್ಲಿ ಅವರದ್ದೇ ಸರ್ಕಾರ ಬಂದು ಎರಡುವರೆ ವರ್ಷಗಳು ಪೂರೈಸಿದೆ ಆದರೆ ಆಗ ಬೆಂಬಲ ಸೂಚಿಸಿದ್ದ ಯಾರೋಬ್ಬ ಮುಖಂಡರು ನಮಗೆ ನ್ಯಾಯ ಕೊಡಿಸುವಲ್ಲಿ ಮುಂದಾಗುತ್ತಿಲ್ಲಾ. ನ್ಯಾಯ ಕೊಡಿಸುವ ಬದಲು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ, ಇದು ಮುಂದೆ ಅವರಿಗೆ ಮುಳುವಾಗಲಿದೆ ಎನ್ನುವ ಎಚ್ಚರಿಕೆಯನ್ನು ನೀಡಲು ಬಯಸುತ್ತೇನೆ ಎಂದು ಹೇಳಿದರು.
ನಮ್ಮ ಪಾದಯಾತ್ರೆಯು ಸರ್ಕಾರದ ವಿರುದ್ಧ ಅಥವಾ ರಾಜಕೀಯ ಪಕ್ಷದ ವಿರುದ್ದವೂ ಅಲ್ಲ, ನಮ್ಮ ಸಮಾಜಕ್ಕೆ ಆಗಿರುವ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಮಾನತೆಯ ಅನ್ಯಾಯವನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನವನ್ನು ಮಾಡುತ್ತಿದ್ದು, ಇದಕ್ಕೆ ಅಡ್ಡಿಪಡಿಸುವದನ್ನು ನಾವು ಸಹಿಸುವುದಿಲ್ಲ. ನಮ್ಮ 18 ಬೇಡಿಕೆಗಳಿಗಾಗಿ ನಡೆದಿರುವ 41 ದಿನಗಳ ಪಾದಯಾತ್ರೆಯು ಫೆ.12 ಬೆಂಗಳೂರಿಗೆ ತಲುಪಲಿದೆ. ಅಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ಬೆಂಗಳೂರಿನಲ್ಲಿ ಉಪವಾಸ ಸತ್ಯಗ್ರಹವನ್ನು ಕೈಗೊಂಡು ಸಮಾಜಕ್ಕಾಗಿ ನನ್ನ ಪ್ರಾಣ ತ್ಯಾಗಕ್ಕೂ ಸಿದ್ದವಿರುವದಾಗಿ ಎಂದು ಹೇಳಿದರು.
ಮಾಜಿ ಎಂಎಲ್ಸಿ ಎಚ್.ಆರ್ ಶ್ರೀನಾಥ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ, ಚಿತ್ರದುರ್ಗ ಛಲವಾದಿ ಪೀಠದ ಜಗದ್ಗುರು ಬಸವನಾಗಿದೇವ ಶರಣರು, ಕೆಪಿಎಸ್ಸಿ ಮಾಜಿ ಸದಸ್ಯ ಡಾ.ಲಕ್ಷ್ಮೀನರಸಯ್ಯ ತುಮಕೂರು ಮಾತನಾಡಿದರು.
ಅಖಿಲ ಭಾರತ ಉಪ್ಪಾರ ಗುರುಪೀಠದ ಶ್ರೀ ಜಗದ್ಗುರು ಭಗೀರಥಾನಂದಪುರಿ ಸ್ವಾಮೀಜಿ ರಾಂಪೂರಹಳ್ಳಿ, ಸುಲೆಪೇಟ್ ವಿಶ್ವಕರ್ಮ ಏಕದಂಡಗಿ ಮಠ, ಶ್ರೀ ದೊಡ್ಡೇಂದ್ರ ಸ್ವಾಮಿಗಳು, ಹಡಪದ ಮಹಾಸಂಸ್ಥಾನ ಶ್ರೀ ಹಡಪದ ಅಪ್ಪಣ್ಣ ವೀರದೇವರು ಶಹಾಬಾದ, ನದಿಸಿನ್ನೂರ್ ಹೂಗಾರ ಮಾದಯ್ಯ ನವರ ಮಹಾ ಶಕ್ತಿ ಪೀಠದ ಶ್ರೀ ಗುರುರಾಜೇಂದ್ರ ಶಿವಯೋಗಿಗಳು, ಬಾಗಲಕೋಟ್ ಶಿವಸಿಂಬಿ ಸಮಾಜ ಜಗದ್ಗುರು ಪೀಠದ ಶ್ರೀ ಮಹಾಂತದೇವರು ಸಾನಿಧ್ಯ ವಹಿಸಿದ್ದರು.
ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಶಾಸಕ ಡಾ.ಅವಿನಾಶ್ ಜಾಧವ, ಭೂದಾನಿ ಸುರೇಶ್ ಗುತ್ತೇದಾರ, ಮಹಿಳಾ ಅಧ್ಯಕ್ಷೆ ಪೂರ್ಣಿಮಾ ಹಾವೇರಿ, ಮುಖಂಡರಾದ ವೆಂಕಟೇಶ್ ಕಡೇಚೂರ, ಮಹಾದೇವ ಗುತ್ತೇದಾರ, ಕುಪೇಂದ್ರ ಗುತ್ತೇದಾರ, ಅಂಬಯ್ಯ ಗುತ್ತೇದಾರ, ನಿತೀನ್ ಗುತ್ತೇದಾರ, ವಿನಯ್ ಗುತ್ತೇದಾರ, ರಾಜೇಶ್ ಡಿ.ಗುತ್ತೇದಾರ, ಕುಪೇಂದ್ರ ಗುತ್ತೇದಾರ, ಪ್ರವೀಣ್ ಗುತ್ತೇದಾರ, ವೆಂಕಟೇಶ್ ಗುಂಡಾನೋರ, ವೆಂಕಟೇಶ್ ಮುಸ್ತಾಜರ್ ಸೇಡಂ, ದೇವಿಂದ್ರ ಗುತ್ತೇದಾರ ಜೇವರ್ಗಿ, ಮಹೇಶ್ ಗುತ್ತೇದಾರ, ರವೀಂದ್ರ ಸಜ್ಜನಶೆಟ್ಟಿ, ಬಸವರಾಜ ಬೆಣ್ಣೂರಕರ್, ಅಯ್ಯಪ್ಪ ರಾಮತೀರ್ಥ, ಮಂಚೇಗೌಡ, ನಾಗರಾಜ ನಾಯ್ಕ ಸಾಗರ, ಸಂತೋಷಕುಮಾರ, ಶಿವರಾಜ್ ಗುತ್ತೇದಾರ, ಶ್ರೀಮಂತ ಗುತ್ತೇದಾರ, ಕಾಶಣ್ಣ ಗುತ್ತೇದಾರ, ಶಿವಯ್ಯ ಗುತ್ತೇದಾರ, ಶ್ರೀಶೈಲ ಗುತ್ತೇದಾರ, ಸುನೀಲ್ ಗುತ್ತೇದಾರ, ಸಂತೋಷ ಗುತ್ತೇದಾರ, ರವಿ ಸೂಲಹಳ್ಳಿ, ರಾಮು ಗಡ್ಡಿಮನಿ, ದೇವಪ್ಪ ನಂದೂರಕರ್ ಸೇರಿದಂತೆ ಇತರರು ಇದ್ದರು.
ಬಸಯ್ಯ ಗುತ್ತೇದಾರ ಸಂಗಡಿಗರು ಪ್ರಾರ್ಥಿಸಿದರು, ಡಾ.ಸದಾನಂದ ಪೆರ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಶಿನಾಥ ಗುತ್ತೇದಾರ ನಿರೂಪಣೆ ಮಾಡಿದರು. ಇದಕ್ಕೂ ಮುನ್ನ ಕರದಾಳ ದಿಂದ ಚಿತ್ತಾಪುರ ಕ್ಕೆ 9 ಕಿಮೀ ಪಾದಯಾತ್ರೆ ಮೊದಲ ದಿನ ಯಶಸ್ವಿಯಾಗಿ ನಡೆಯಿತು.
