ಜು.4 ರಂದು ಚಿತ್ತಾಪುರ ಪ್ರಜಾ ಸೌಧ ಉದ್ಘಾಟನೆ, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲು ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ನಿರ್ಮಾಣವಾದ ನೂತನ ಪ್ರಜಾ ಸೌಧ (ಮಿನಿ ವಿಧಾನಸೌಧ) ಉದ್ಘಾಟನೆ ಕಾರ್ಯಕ್ರಮ ಜುಲೈ 4 ರಂದು ಬೆಳಗ್ಗೆ 11 ಗಂಟೆಗೆ ನೆರವೇರಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಅವರು ಜಂಟಿಯಾಗಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಕಂದಾಯ ಇಲಾಖೆಯ 12 ಕೋಟಿ ಅನುದಾನದಲ್ಲಿ ಗೃಹ ಮಂಡಳಿ ಸಂಸ್ಥೆ ಅಡಿಯಲ್ಲಿ ನಿರ್ಮಾಣವಾದ ನೂತನ ಪ್ರಜಾ ಸೌಧ ಉದ್ಘಾಟನೆಯನ್ನು ಕ್ಷೇತ್ರದ ಶಾಸಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ತಾಂತ್ರಿಕ ಕಾರಣದಿಂದ ಉದ್ಘಾಟನೆ ಸ್ವಲ್ಪ ವಿಳಂಬವಾಗಿತ್ತು, ಸ್ಥಳದ ವ್ಯಾಜ್ಯ ಕೋರ್ಟ್ ಇತ್ಯರ್ಥ ಮಾಡಿದೆ ಹೀಗಾಗಿ ಈಗ ಯಾವುದೇ ಸಮಸ್ಯೆ ಇಲ್ಲ. ಈಗ ಪ್ರಜಾ ಸೌಧದ ಉದ್ಘಾಟನೆಗೆ ಕಾಲ ಕೂಡಿಬಂದಿದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾಂಗ್ರೆಸ್ ಪಕ್ಷದ ಜಿಲ್ಲಾ ನಾಯಕರು ಆಗಮಿಸಲಿದ್ದಾರೆ, ಹೀಗಾಗಿ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು, ಜನಪ್ರತಿನಿಧಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ ಭೀಣ್ಣಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್, ಪುರಸಭೆ ಸದಸ್ಯೆ ಶೀಲಾ ಕಾಶಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ರವೀಂದ್ರ ರೆಡ್ಡಿ ಭಂಕಲಗಿ, ಸಿದ್ದಣ್ಣಗೌಡ ಪಾಟೀಲ, ಉದಯಕುಮಾರ್ ಸಾಗರ, ನಾಗು ಕಲ್ಲಕ್, ಬಸವರಾಜ ಮುಡಬೂಳ ಸೇರಿದಂತೆ ಇತರರು ಇದ್ದರು.

