ಕಲಬುರಗಿ ಜಿಲ್ಲೆ ಬರಗಾಲ ಪೀಡಿತ ಪ್ರದೇಶವನ್ನಾಗಿ ಘೋಷಿಸಿಲು: ಗುತ್ತೇದಾರ ಒತ್ತಾಯ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆ ಎದುರಾಗಿದ್ದು, ರೈತರು, ಕೃಷಿ ಕಾರ್ಮಿಕರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಹೀಗಾಗಿ ಕಲಬುರಗಿ ಜಿಲ್ಲೆಯನ್ನು ಸರ್ಕಾರ ಬರಗಾಲ ಪೀಡಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಕಲಬುರಗಿ ಜಿಲ್ಲಾ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಲಬುರಗಿ ಜಿಲ್ಲೆಯ ವಿವಿಧೆಡೆ ಓಡಾಡಿದ್ದು, ಹೆಚ್ಚಿನ ಪ್ರಮಾಣದಲ್ಲಿ ರೈತರು ಬಿತ್ತನೆ ನಡೆಸದೇ ಇರುವುದು ಮತ್ತು ಬಿತ್ತನೆ ನಡೆಸಿದರೂ ತೇವಾಂಶದ ಕೊರತೆಯಿಂದ ಬೀಜಗಳು ಮೊಳಕೆ ಬಾರದಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಬರ ಪರಿಸ್ಥಿತಿ ಎದುರಾಗಿದ್ದು ಸರ್ಕಾರ ರೈತರ ನೆರವಿಗೆ ಧಾವಿಸಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. 2025-26ನೇ ಸಾಲಿನ ಮುಂಗಾರು ಬೆಳೆಗಳ ಇಳುವರಿಯ ನಷ್ಟ ಆಧರಿಸಿ ಜಿಲ್ಲೆಗೆ 340 ಕೋಟಿ ವಿಮಾ ಪರಿಹಾರ ಧನವನ್ನು ಸರ್ಕಾರ ಬಾಕಿ ಇರಿಸಿಕೊಂಡಿದೆ. ಇದನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಮಳೆಯನ್ನೇ ನಂಬಿ ಕೃಷಿಯಲ್ಲಿ ತೊಡಗಿದ ರೈತರು ಶೋಚನೀಯ ಸ್ಥಿತಿ ಎದುರಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳು ಕ್ಷೀಣಿಸಿವೆ. ಬಿತ್ತನೆ ಸ್ಥಗಿತಗೊಂಡಿದೆ. ಮಳೆ ಸುರಿಯುವ ಆಶಾಭಾವದಿಂದ ಮುಂಗಾರಿನ ತೊಗರಿ, ಸೋಯಾ, ಹೆಸರು, ಉದ್ದು ಬಿತ್ತಿದ್ದ ರೈತರು, ಈಗ ಮಳೆಯಿಲ್ಲದೇ ಬೆಳೆಯೂ ಬಾರದೇ ನಷ್ಟದ ಮೇಲೆ ನಷ್ಟ ಅನುಭವಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ಈವರೆಗೆ 115 ಮಿ.ಮೀ ಮಳೆ ಸುರಿಯಬೇಕಿತ್ತು ಆದರೆ ಕೇವಲ 70 ಮಿ.ಮೀ ಮಳೆ ಮಾತ್ರ ಸುರಿದಿದೆ. ಶೇ 39ರಷ್ಟು ಮಳೆ ಕೊರತೆ ಎದುರಾಗಿದೆ ಎಂದು ತಿಳಿಸಿದ್ದಾರೆ.

