ಕರ್ನಾಟಕ ಜಲಸಾರಿಗೆ ಮಂಡಳಿಯ ಸಭೆ, ಮಂಗಳೂರು ವಾಟರ್ ಮೆಟ್ರೋಗೆ ಸಿಎಂ ಸಿದ್ದರಾಮಯ್ಯ ಗ್ರೀನ್‌ ಸಿಗ್ನಲ್

ನಾಗಾವಿ ಎಕ್ಸಪ್ರೆಸ್ 

ಬೆಂಗಳೂರು: ಮಂಗಳೂರಿನ ಗುರುಪುರ- ನೇತ್ರಾವತಿ ನದಿಯಲ್ಲಿ ಮಂಗಳೂರು ವಾಟರ್ ಮೆಟ್ರೋ ಯೋಜನೆ ಕಾರ್ಯಗತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ಸೂಚಿಸಿದರು.

ಕಾವೇರಿ ನಿವಾಸದಲ್ಲಿ ನಡೆದ ಕರ್ನಾಟಕ ಜಲಸಾರಿಗೆ ಮಂಡಳಿಯ ಸಭೆಯಲ್ಲಿ, ಇದರ ಜೊತೆಗೆ ಸಾಗರಮಾಲಾ ಯೋಜನೆಯಡಿಯಲ್ಲಿ ಮಂಗಳೂರಿನಲ್ಲಿ ಕರ್ನಾಟಕ ಜಲಸಾರಿಗೆ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಸಹ ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿ ಆದೇಶಿಸಿದ್ದಾರೆ. ರಾಜ್ಯದ ಬಂದರುಗಳು ಅಭಿವೃದ್ಧಿ, ಜಲಸಾರಿಗೆ ಯೋಜನೆಗಳ ಪ್ರಗತಿ, ಸರಕು ಸಾಗಣೆಗೆ ಅವಶ್ಯವಿರುವ ಮೂಲ ಸೌಲಭ್ಯಗಳ ಬಗ್ಗೆ ಸಮಿತಿಯಲ್ಲಿ ಚರ್ಚಿಸಲಾಯಿತು.

ಕರ್ನಾಟಕ ಜಲಸಾರಿಗೆ ಮಂಡಳಿ ಒಟ್ಟು 399 ಹುದ್ದೆಗಳನ್ನು ಹೊಂದಿದ್ದು, ಅದರಲ್ಲಿ 281 ಹುದ್ದೆಗಳು ಖಾಲಿ ಇವೆ. ಖಾಲಿ ಇದ್ದ ಹುದ್ದೆಗಳಲ್ಲಿ ಕೆಲವು ಪ್ರಮುಖ ಪಾತ್ರದ ಹುದ್ದೆಗಳು ಸೇರಿಸಲಾಗಿದ್ದು, ಪರಿಣತಿಯುಳ್ಳ ಹಿರಿಯ ಅಧಿಕಾರಿಗಳನ್ನು ಪರಿಗಣಿಸುವಂತೆ ಸಿಎಂ ಅವರಿಗೆ ಕೆ.ಎಂ.ಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಚಂದ್ರ ಹೆಚ್‌ ಅವರು ಮನವಿ ಸಲ್ಲಿಸಿದ್ದು, ಇದಕ್ಕೆ ಸಿಎಂ ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ.

ಕಾರವಾರ ಬಂದರುದಿಂದ ಸರಕು ಸಾಗಣೆಯ ಸಲುವಾಗಿ ಕೊಂಕಣ್‌ ರೈಲ್ವೇಸ್‌ ಕಾರ್ಪೋರೇಷನ್‌ ಲಿಮಿಟೆಡ್ ನ ಸಹಯೋಗದಲ್ಲಿ ಅಮ್ಡಳ್ಳಿ ರೈಲ್ವೆ ಸೈಡಿಂಗ್‌ ಅಭಿದ್ಧಿಪಡಿಸುವುದರ ಬಗ್ಗೆ ಕೆ.ಎಂ.ಬಿ ಸಿಇಒ ಅವರು ಪ್ರಸ್ತಾವನೆ ಸಲ್ಲಿಸಿದರು.

ರಾಜ್ಯ ಸರ್ಕಾರ 2010 ರಲ್ಲಿ ಹೊನ್ನಾವರ ಬಂದರು ಮಿತಿಯ ಹೊನ್ನಾವರ ಮತ್ತು ಕಾಸರಕೋಡಿನ ಬದಿಯಲ್ಲಿ ಬಾರ್ಜ್/ದೋಣಿ ಲೋಡಿಂಗ್ ಸೌಲಭ್ಯದ ಅಭಿವೃದ್ಧಿಗಾಗಿ ಹೈದರಾಬಾದ್‌ನ ಎಂ/ಎಸ್. ಉತ್ತರ ಕನ್ನಡ ಸಿ ಪೋರ್ಟ್ಸ್ – ಜಿವಿಪಿಆರ್‌ ಇಎಲ್ -ಕನ್ನೋರ್ಟಿಯಂಗೆ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ 1,37,560 ಚದರ ಮೀಟರ್ ಬಂದರು ಭೂಮಿಯನ್ನು ಮಂಜೂರು ಮಾಡಿದೆ. ಈ ಯೋಜನೆಯ ಅಭಿವೃದ್ಧಿಗಾಗಿ ಹೊನ್ನಾವರ ಮತ್ತು ಕಾಸರಕೋಡಿನ ಬದಿಯಲ್ಲಿ ಬಂದರು ಭೂಮಿಯನ್ನು ಕಾಯ್ದಿರಿಸಲಾಗಿದೆ ಇದಕ್ಕೆ ಸಿಎಂ ಅವರು ಅನುಮತಿ ನೀಡುವಂತೆ ಕೆ.ಎಂ.ಬಿ ಸಿಇಒ ಅವರು ಪ್ರಸ್ತಾವನೆ ಸಲ್ಲಿಸಿದರು.

ಪುನರ್ವಸತಿ, ಬಂದರು ಸಂಬಂಧಿತ ಕಾರ್ಯಾಚರಣೆಗಳಿಗೆ ಭೂಮಿ ಹಂಚಿಕೆ ಗುತ್ತಿಗೆ ಅವಧಿಯನ್ನು ಪರಿಶೀಲಿಸಿ, ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದು ಜತೆಗೆ ಅತಿಕ್ರಮಣ ಮಾಡಿಕೊಂಡಿರುವವರನ್ನು ಕೂಡಲೇ ಎತ್ತಂಗಡಿ ಮಾಡುವಂತೆ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುತಿಸಲಾಗಿರುವ ದ್ವೀಪಗಳಿಗೆ ಸಂಬಂಧಿಸಿದಂತೆ ಡ್ರೋಣ್ ಮೂಲಕ ಸರ್ವೇ ಮಾಡಿಸಿ, ಇನ್ನು ಮೂರು ತಿಂಗಳ ಒಳಗಾಗಿ ವರದಿ ನೀಡುವಂತೆ ಸಿಎಂ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಆಂಧ್ರ ಪ್ರದೇಶ, ವಿಶಾಖಪಟ್ಟಣ, ಕೇರಳ, ತಮಿಳನಾಡು, ಗುಜರಾತ್ ಗಳಲ್ಲಿ ಬಂದರುಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದರ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಬಂದರುಗಳಿಗೆ ಎಲ್ಲಾ ರೀತಿಯ ಸೌಲಭ್ಯ ನೀಡುವುದಾಗಿ ಸಿಎಂ ಅವರು ಭರವಸೆ ನೀಡಿದರು.

ಸಭೆಯಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್‌ ವೈದ್ಯ, ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ ಎನ್‌. ಮಂಜುಳಾ ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!