ಕರ್ನಾಟಕ ಉಪ ಚುನಾವಣೆ: ಎರಡು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ, ಬಳ್ಳಾರಿಯಲ್ಲಿ ರೆಡ್ಡಿ ಹವಾ ಮತ್ತೇ ಶುರು
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಕರ್ನಾಟಕ ರಾಜ್ಯದ ಮೂರು ಕ್ಷೇತ್ರಗಳಿಗೆ ನವೆಂಬರ್ 13 ಕ್ಕೆ ಈಗಾಗಲೇ ಉಪ ಚುನಾವಣೆ ಘೋಷಣೆ ಆಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ಹೊರತುಪಡಿಸಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.
ಸಂಡೂರು ಕ್ಷೇತ್ರಕ್ಕೆ ಬಂಗಾರು ಹನುಮಂತು ಹಾಗೂ ಶಿಗ್ಗಾಂವಿ ಕ್ಷೇತ್ರಕ್ಕೆ ಭರತ್ ಬಸವರಾಜ್ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದೆ. ಶಿಗ್ಗಾಂವಿ ಕ್ಷೇತ್ರಕ್ಕೆ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಮಾಜಿ ಸಿಎಂ ಹಾಲಿ ಎಂಪಿ ಬಸವರಾಜ ಬೊಮ್ಮಾಯಿ ಹಾಗೂ ಸಂಡೂರು ಕ್ಷೇತ್ರಕ್ಕೆ ತಮ್ಮ ಪರಮಾಪ್ತನಿಗೆ ಟಿಕೆಟ್ ಕೊಡಿಸುವಲ್ಲಿ ಮಾಜಿ ಸಚಿವ ಹಾಲಿ ಶಾಸಕ ಜನಾರ್ಧನ ರೆಡ್ಡಿ ಅವರು ಯಶಸ್ವಿಯಾಗಿದ್ದಾರೆ.
ಬಳ್ಳಾರಿಯಲ್ಲಿ ರೆಡ್ಡಿ ಹವಾ ಮತ್ತೇ ಶುರು: ಮಾಜಿ ಸಚಿವ ಹಾಲಿ ಗಂಗಾವತಿ ಕ್ಷೇತ್ರದ ಶಾಸಕ ಜನಾರ್ಧನ ರೆಡ್ಡಿಗೆ ಕೋರ್ಟ್ ಬಳ್ಳಾರಿ ಜಿಲ್ಲೆಗೆ ಪ್ರವೇಶಾವಕಾಶಕ್ಕೆ ಅನುಮತಿ ನೀಡಿದ ನಂತರ ಬಳ್ಳಾರಿ ಜಿಲ್ಲೆಯಲ್ಲಿ ಮತ್ತೇ ತಮ್ಮ ರಾಜಕೀಯ ಅಸ್ತಿತ್ವ ಮರುಸ್ಥಾಪಿಸಲು ಉಪ ಚುನಾವಣೆ ಉತ್ತಮ ಅಡಿಪಾಯ ಆಗಲಿದೆ ಎಂಬುವ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಭಾರತೀಯ ಜನತಾ ಪಕ್ಷದಿಂದ ದೂರವಿದ್ದ ಗಾಲಿ ಜನಾರ್ಧನ ರೆಡ್ಡಿ ಇಚೇಗೆ ಮರಳಿ ಗೂಡಿಗೆ ಸೇರಿದ್ದರು. ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ತಮ್ಮ ಆಪ್ತ ಬಂಗಾರು ಹನುಮಂತು ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದು ಈ ಉಪ ಚುನಾವಣೆ ಸವಾಲ್ ಆಗಿ ಸ್ವೀಕರಿಸಿ ಅಭ್ಯರ್ಥಿ ಗೆಲ್ಲಿಸುವ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಹೀಗಾಗಿ ಬರುವ ದಿನಗಳಲ್ಲಿ ಚುನಾವಣೆ ಮತ್ತಷ್ಟು ರಂಗೇರುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ.
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು ಇನ್ನೂ ಯಾವುದೇ ಹೆಸರನ್ನು ಘೋಷಣೆ ಮಾಡಿಲ್ಲ. ಆದರೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಅವರೇ ಮೈತ್ರಿ ಅಭ್ಯರ್ಥಿ ಆಗಲಿದ್ದಾರೆ.