ಕಲಬುರಗಿ ಕೋಟೆ ಪುನಶ್ಚೇತನಕ್ಕೆ ₹20 ಕೋಟಿ ಯೋಜನೆ: ಸಂಸದ ರಾಧಾಕೃಷ್ಣ ದೊಡ್ಡಮನಿ ಅವರಿಂದ ಕೇಂದ್ರ ಸಚಿವರಿಗೆ ಮನವಿ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ನಗರದ ಐತಿಹಾಸಿಕ ಕಲಬುರಗಿ ಕೋಟೆಯ ಸಂರಕ್ಷಣೆ ಮತ್ತು ಪುನಶ್ಚೇತನಕ್ಕಾಗಿ ರೂಪಿಸಲಾದ ₹20 ಕೋಟಿ ವೆಚ್ಚದ ಯೋಜನೆಗೆ ತಕ್ಷಣದ ಆಡಳಿತಾತ್ಮಕ ಅನುಮೋದನೆ ನೀಡಬೇಕೆಂದು ಆಗ್ರಹಿಸಿ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.

ಅಮೃತ್ 2.0 (AMRUT 2.0) ಯೋಜನೆಯಡಿ ಈ ಯೋಜನೆಯನ್ನು ಪ್ರಸ್ತಾಪಿಸಲಾಗಿದ್ದು, ಕೋಟೆಯ ಕಂದಕದ ಜಲಮೂಲ ಮರುಜೀವಗೊಳಿಸುವುದು, ಉದ್ಯಾನವನ ಅಭಿವೃದ್ಧಿ, ಭೂದೃಶ್ಯ ನಿರ್ಮಾಣ (ಲ್ಯಾಂಡ್‌ಸ್ಕೇಪಿಂಗ್), ಸಸಿ ನೆಡುವುದು ಹಾಗೂ ವಿವಿಧ ಪರಿಸರ ಸುಧಾರಣಾ ಕಾಮಗಾರಿಗಳನ್ನು ಒಳಗೊಂಡಿದೆ. ಸ್ಮಾರಕವನ್ನು ಸಂರಕ್ಷಿಸುವುದರ ಜೊತೆಗೆ ಇದನ್ನು ‘ಹಸಿರು ಪಾರಂಪರಿಕ ತಾಣ’ವಾಗಿ (Green Heritage Landmark) ಅಭಿವೃದ್ಧಿಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಸಂಸದರು ಈ ಸಂದರ್ಭದಲ್ಲಿ ಕೇಂದ್ರ ಸಚಿವರಿಗೆ ವಿವರಿಸಿದರು.

ಈ ಪ್ರಸ್ತಾವನೆಯು ಪ್ರಸ್ತುತ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ಕೇಂದ್ರ ಕಚೇರಿಯಲ್ಲಿ ಬಾಕಿಯಿದ್ದು, ಕೇಂದ್ರ ಸಂಸ್ಕೃತಿ ಸಚಿವರು ಮಧ್ಯಪ್ರವೇಶಿಸಿ ಶೀಘ್ರ ಆಡಳಿತಾತ್ಮಕ ಮಂಜೂರಾತಿ ದೊರಕಿಸಿಕೊಡಲು ಎಎಸ್‌ಐ ಜೊತೆ ಸಮನ್ವಯ ಸಾಧಿಸಬೇಕೆಂದು ಸಂಸದರು ಈ‌ ಸಂದರ್ಭದಲ್ಲಿ ಒತ್ತಾಯಿಸಿದರು.

ಕಲಬುರಗಿಯ ಶ್ರೀಮಂತ ಐತಿಹಾಸಿಕ ಪರಂಪರೆಯನ್ನು ರಕ್ಷಿಸುವುದರ ಜೊತೆಗೆ ಪ್ರವಾಸೋದ್ಯಮ ಪ್ರೋತ್ಸಾಹ, ಪರಿಸರ ಸುಧಾರಣೆ ಹಾಗೂ ಪ್ರಾದೇಶಿಕ ಅಭಿವೃದ್ಧಿಗೆ ಈ ಉಪಕ್ರಮವು ಪ್ರಮುಖ ಬಲ ನೀಡಲಿದೆ ಎಂದು ರಾಧಾಕೃಷ್ಣ ದೊಡ್ಡಮನಿ‌ ಈ ಸಂದರ್ಭದಲ್ಲಿ ಆಶಾಭಾವ ವ್ಯಕ್ತಪಡಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!