ಕೊಳಗೇರಿ ಅಭಿವೃದ್ಧಿ ಮಂಡಳಿಯ ಮನೆಗಳಿಗೆ ಮೌಲಭೂತ ಸೌಲಭ್ಯಗಳು ಒದಗಿಸುವಂತೆ ಹೋರಾಟ ಸಮಿತಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ದಿಗ್ಗಾಂವ ರಸ್ತೆ ಮತ್ತು ಸಾತನೂರ ರಸ್ತೆಯಲ್ಲಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮನೆಗಳಿಗೆ ಮೌಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಹೋರಾಟ ಸಮಿತಿಯ ಮುಖಂಡರು ಪುರಸಭೆ ವ್ಯವಸ್ಥಾಪಕರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ದಿಗ್ಗಾಂವ ರಸ್ತೆ ಮತ್ತು ಸಾತನೂರ ರಸ್ತೆಯಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ನಿರ್ಮಾಣವಾದ ಮನೆಗಳಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಗಳು ವಾಸ ಮಾಡುತ್ತಿವೆ. ಹೀಗಾಗಿ ಇಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದೇ ಇರುವುದರಿಂದ ನಿವಾಸಿಗಳು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ಸದರಿ ಸಾವಿರ ಮನೆಗಳನ್ನು ಕಳೆದ 27 ಫೆಬ್ರವರಿ 2026 ರಂದು ಪುರಸಭೆಗೆ ಹಸ್ತಾಂತರ ಮಾಡಲಾಗಿದೆ, ಆದರೂ ಇಲ್ಲಿವರೆಗೆ ಪುರಸಭೆ ಅಧಿಕಾರಿಗಳು ಮಾತ್ರ ಈಕಡೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಸಾತನೂರ ರಸ್ತೆ ಗೇಟ್ ಮುಖ್ಯದ್ವಾರದ ಬಲಗಡೆ ನಾಲ್ಕು ಕಂಬಕ್ಕೆ ವಿದ್ಯುತ್ ಬಲ್ಬ್ ಇರುವುದಿಲ್ಲ. ಕೂಡಲೇ ವಿದ್ಯುತ್ ಬಲ್ಬಗಳನ್ನು ಅಳವಡಿಸಬೇಕು, ದಿಗ್ಗಾಂವ ರಸ್ತೆ ಹಾಗೂ ಸಾತನೂರ ರಸ್ತೆ ಪ್ರತಿನಿತ್ಯ ಕಸದ ವಾಹನ ಬಂದು ಏರಿಯಾದ ಕಸವನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು, ದಿಗ್ಗಾಂವ ರಸ್ತೆ ಹಾಗೂ ಸಾತನೂರ ರಸ್ತೆ ಏರಿಯಾದಲ್ಲಿ ಎಲ್ಲಾ ಕಡೆ ಗಿಡ ಕಂಟಿಗಳು ಬೆಳೆದಿದ್ದು ಅವುಗಳನ್ನು ಕೂಡಲೇ ಕಡಿದು ಸ್ವಚ್ಛಗೊಳಿಸಬೇಕು, ದಿಗ್ಗಾಂವ ರಸ್ತೆ ಹಾಗೂ ಸಾತನೂರ ರಸ್ತೆ ಪ್ರತಿಯೊಂದು ಬ್ಲಾಕನಲ್ಲಿ 8 ಕುಟುಂಬಗಳು ಇದ್ದು ಪ್ರತಿಯೊಂದು ಬ್ಲಾಕಗೆ ಕಸ ಶೇಖರಣೆ ಡಬ್ಬಿ ಇಡಬೇಕು, ದಿಗ್ಗಾಂವ ರಸ್ತೆ ಹಾಗೂ ಸಾತನೂರ ರಸ್ತೆ ಪ್ರತಿ ದಿನ ನಮ್ಮ ಏರಿಯಾದಲ್ಲಿ ನೀರು ಬಿಡಲು ಒಬ್ಬ ಪಂಪ್ ಅಪರೇಟರನ್ನು ನೇಮಕ ಮಾಡಬೇಕು, ದಿಗ್ಗಾಂವ ರಸ್ತೆ ಹಾಗೂ ಸಾತನೂರ ರಸ್ತೆಯಲ್ಲಿ ನೀರಿನ ಪೈಪ್ ಒಡೆದ ಕಾರಣ ಸಾರ್ವಜನಿಕರು ನೀರಿಗಾಗಿ ಪರದಾಡುತ್ತಿದ್ದು ಕೂಡಲೇ ಅದನ್ನು ರಿಪೇರಿ ಮಾಡಬೇಕೆಂಬ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.
ಈ ಕೂಡಲೇ ಸಮಸ್ಯೆಗಳನ್ನು ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತ ತಾಂಡೂರಕರ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೃಷ್ಣ ಭೋವಿ, ತಿಮ್ಮು ತಾಂಡೂರಕರ್, ಶಂಭು ಭೋವಿ, ಅಂಬು ಚವ್ಹಾಣ, ರಾಜು ಗುತ್ತೇದಾರ, ಸುನೀಲ್ ಪವಾರ, ದೀಲಿಪ್ ಕಟಗೆ, ಪರಶುರಾಮ ರಾಜಾಪೂರ, ಚಿದಾನಂದ ಕಾಶಿ, ನಾಗು ಹೋಳಿಕಟ್ಟಿ, ಸೂರ್ಯಕಾಂತ, ರಾಜು ಭಜಂತ್ರಿ, ಸಂತೋಷ ಭಂಗಿ ಸೇರಿದಂತೆ ಇತರರು ಇದ್ದರು.

