ಕುಂದನೂರಿನ ಐತಿಹಾಸಿಕ ಕಾಳಿಕಾದೇವಿ ದೇಗುಲದಲ್ಲಿ ನ. 20 ರಿಂದ 5 ದಿನಗಳ ಧಾರ್ಮಿಕ ಉತ್ಸವ ದೇವಿ ಪುರಾಣ, ಮಹಾಚಂಡಿ ಯಜ್ಞ: ಪಂಚಾಳ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ಭೀಮಾ ನದಿ ತೀರದ ಪುಣ್ಯಕ್ಷೇತ್ರ, ತ್ರೇತಾಯುಗದ ಐತಿಹಾಸಿಕ ಹಿನ್ನೆಲೆಯುಳ್ಳ ಕುಂದನೂರು ಗ್ರಾಮದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ನವೆಂಬರ್ 20 ರಿಂದ 24 ರವರೆಗೆ ಐದು ದಿನಗಳ ಕಾಲ ಭವ್ಯ ಧಾರ್ಮಿಕ ಉತ್ಸವ, ದೇವಿ ಪುರಾಣ, ಮಹಾಚಂಡಿ ಯಜ್ಞ ಹಾಗೂ ದೀಪೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ವಿಶ್ವಕರ್ಮ ಸಮಾಜ ಹಾಗೂ ಕಾಳಿಕಾದೇವಿ ಕ್ಷೇತ್ರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಪಂಚಾಳ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ವಿಶ್ವಕರ್ಮ ಸಮಾಜದ ವತಿಯಿಂದ ಅತ್ಯಂತ ಶ್ರದ್ಧಾಭಕ್ತಿಯಿಂದ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಕಲಬುರಗಿ ನಗರದ ಏಕದಂಡಗಿ ಮಠದ ಶ್ರೀ ಸುರೇಂದ್ರ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಸತತ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ಪ್ರತಿನಿತ್ಯ ಸಂಜೆ 7.30 ಗಂಟೆಗೆ ಹಸನಾಪುರದ ಮಲ್ಲಿಕಾರ್ಜುನ ಶಾಸ್ತ್ರಿ ಅವರಿಂದ ‘ದೇವಿ ಪುರಾಣ’ ಪ್ರವಚನ ನಡೆಯಲಿದೆ.

ಉತ್ಸವದ ಪ್ರಮುಖ ಆಕರ್ಷಣೆಗಳು:

ನ. 23 ರಂದು ಸಾಮೂಹಿಕ ಉಪನಯನ ಹಾಗೂ ಸನ್ಮಾನ:

ಅಂದು ಬೆಳಗ್ಗೆ 10 ಗಂಟೆಗೆ ವಿಶ್ವಕರ್ಮ ಸಮಾಜದ ವಟುಗಳಿಗೆ ಸಾಮೂಹಿಕ ಉಪನಯನ ಸಂಸ್ಕಾರ ನೆರವೇರಲಿದೆ. ಇದೇ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆಯಲ್ಲಿ ಗಣನೀಯ ಸಾಧನೆ ಮಾಡಿದ ಸುಪ್ರಸಿದ್ಧ ದಂತ ವೈದ್ಯ ಡಾ ಗುರುರಾಜ ಅರಿಕೇರಿ, ಸುಪ್ರಸಿದ್ಧ ಅರವಳಿಕೆ ತಜ್ಞ ಡಾ ಮೌನೇಶ್ವರ ಕೊಪ್ಪದ, ಹಾಗೂ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ ಶಕ್ತಿ ಕೊಪ್ಪದ್ ಅವರಿಗೆ ಸನ್ಮಾನಿಸಿ ಗೌರವಿಸಲಾಗುವುದು.

ನ. 24 ರಂದು ಮಹಾಚಂಡಿ ಯಜ್ಞ ಮತ್ತು ದೀಪೋತ್ಸವ:

ಉತ್ಸವದ ಸಮಾರೋಪ ದಿನವಾದ ನವೆಂಬರ್ 24 ರಂದು ಲೋಕಕಲ್ಯಾಣಾರ್ಥವಾಗಿ ಮಹಾಚಂಡಿ ಯಜ್ಞ ಹಾಗೂ ಸಂಜೆ ದೇಗುಲದ ಆವರಣದಲ್ಲಿ ಕಣ್ಮನ ಸೆಳೆಯುವ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ.

ಹರ-ಗುರು ಚರಮೂರ್ತಿಗಳ ದಿವ್ಯ ಸಾನಿಧ್ಯ:

ಈ ಐತಿಹಾಸಿಕ ಉತ್ಸವಕ್ಕೆ ಸೌಹಾರ್ದತೆಯ ಸಂಕೇತವಾಗಿ ವಿವಿಧ ಮಠಾಧೀಶರು ಹಾಗೂ ಧರ್ಮಗುರುಗಳು ಸಾಕ್ಷಿಯಾಗಲಿದ್ದಾರೆ. ಆಳ್ಳೊಳ್ಳಿಯ ಶ್ರೀ ನಾಗಪ್ಪಯ್ಯ ಸ್ವಾಮೀಜಿ, ರಾವೂರ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಹಳಕರ್ಟಿಯ ಹಜರತ್ ಮೌಲಾನಾ ಸೈಯದ್ ಹುಸೇನಿ ಪೀರಾ ಶಾ ಖಾದ್ರಿ ಹಾಗೂ ಶ್ರೀ ರಾಜಶೇಖರ ಸ್ವಾಮೀಜಿ ಸೇರಿದಂತೆ ಈ ಭಾಗದ ಪ್ರಮುಖ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಜೊತೆಗೆ ಕ್ಷೇತ್ರದ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಸಾಹಿತಿಗಳು, ಕವಿಗಳು ಹಾಗೂ ಕಲಾವಿದರು ಭಾಗವಹಿಸಲಿದ್ದಾರೆ.

ಕ್ಷೇತ್ರದ ಪೌರಾಣಿಕ ಮಹತ್ವ:

ಭೀಮಾ ನದಿ ದಡದಲ್ಲಿರುವ ಈ ಶ್ರೀ ಕಾಳಿಕಾದೇವಿ ದೇಗುಲವು ತ್ರೇತಾಯುಗದಲ್ಲಿ ಸ್ಥಾಪನೆಯಾಗಿದೆ ಎಂಬ ಪ್ರತೀತಿ ಇದ್ದು, ಅನೇಕ ಋಷಿ-ಮುನಿಗಳು ತಪಸ್ಸು ಮಾಡಿದ ಪವಿತ್ರ ತಾಣವಾಗಿದೆ. ಜಾಗೃತ ಶಕ್ತಿ ಪೀಠವಾಗಿರುವ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಈ ಬಾರಿಯ ಉತ್ಸವದಲ್ಲಿಯೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದ್ದಾರೆ.

ಈ ಸಂಧರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, ಮುಖಂಡರಾದ ದೇವೇಂದ್ರ ಬಡಿಗೇರ ಹಲಕರ್ಟಿ, ಸಿದ್ಧು ಪಂಚಾಳ, ಅರ್ಜುನ ಪಂಚಾಳ, ಸುನೀಲ ಪಂಚಾಳ, ಮಾಣಿಕ ವಿಶ್ವಕರ್ಮ, ಸುಭಾಷ ಪಂಚಾಳ,  ಮಾಣಿಕ ವಿಶ್ವಕರ್ಮ, ಹಾಗೂ ಬಾಬಾ ಖಾನ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!