ಮಳಖೇಡ ಅಲ್ಟ್ರಾಟೇಕ್ ಸಿಮೆಂಟ ಕಂಪನಿಯು ತನ್ನ ನಾಲ್ಕನೆಯ ಸಿಮೆಂಟ್ ಉತ್ಪಾದನಾ ಘಟಕಕ್ಕೆ ರೈತರಿಂದ ಫಲವತ್ತಾದ ಕೃಷಿ ಜಮೀನುಗಳನ್ನು ಖರೀದಿಸಿ ಯೋಗ್ಯ ಬೆಲೆ ನೀಡದೆ ವಂಚನೆ ಮಾಡಿದೆ: ಶೂನ್ಯ ವೇಳೆಯಲ್ಲಿ ಪ್ರಶ್ನಿಸಿದ ಎಂಎಲ್ಸಿ ತಳವಾರ ಸಾಬಣ್ಣ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ | ಅಲ್ಟ್ರಾಟೇಕ್ ಸಿಮೆಂಟ ಲಿಮಿಟೆಡ್ ಮಳಖೇಡ ಕಂಪನಿಯು ತನ್ನ ನಾಲ್ಕನೆಯ ಸಿಮೆಂಟ್ ಉತ್ಪಾದನಾ ಘಟಕಕ್ಕೆ ರೈತರಿಂದ ಫಲವತ್ತಾದ ಕೃಷಿ ಜಮೀನುಗಳನ್ನು ಖರೀದಿಸಿ ಯೋಗ್ಯ ಬೆಲೆ ನೀಡದೆ ವಂಚನೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ತಳವಾರ ಸಾಬಣ್ಣ ಶೂನ್ಯ ವೇಳೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಿಗೆ ಪ್ರಶ್ನಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮೆ. ಅಲ್ಟ್ರಾಟೆಕ್ ಸಿಮೆಂಟ ಲಿಮಿಟೆಡ್, ರಾಜಶ್ರೀ ಸಿಮೆಂಟ ವರ್ಕ್ಸ ಆದಿತ್ಯ ನಗರ, ಮಳಖೇಡ ಕಂಪನಿಯು ತನ್ನ ನಾಲ್ಕನೆಯ ಸಿಮೆಂಟ್ ಉತ್ಪಾದನಾ ಘಟಕಕ್ಕೆ ಹಂಗನಹಳ್ಳಿ, ಊಡಗಿ, ಹುಡಾ (ಬಿ) ಮತ್ತು ನೃಪತುಂಗ ನಗರ ಗ್ರಾಮಗಳ ರೈತರಿಂದ ಫಲವತ್ತಾದ ಕೃಷಿ ಜಮೀನು ಖರೀದಿಸಿ ಯೋಗ್ಯ ಬೆಲೆ ನೀಡದೆ ವಂಚನೆ ಮಾಡಿರುವ ವರದಿಯಾಗಿದೆ. ಅಲ್ಟ್ರಾಟೆಕ್ ಸಿಮೆಂಟ ನಾಲ್ಕನೇ ಘಟಕಕ್ಕಾಗಿ ಸರ್ಕಾರ 999 ಎಕರೆ ಕೃಷಿ ಜಮೀನು ಖರೀದಿ ಮಾಡಲು 2010 ರಲ್ಲಿ 572 ಎಕರೆ 24 ಗುಂಟಿ ಹಾಗೂ 2011 ರಲ್ಲಿ 425 ಎಕರೆ 30 ಗುಂಟೆ ಜಮೀನುಗಳ ಅಧಿಸೂಚನೆ ಹೊರಡಿಸಿದೆ. ಜಮೀನು ಖರೀದಿಗೆ ಮಂಜೂರಾತಿ ನೀಡುವಾಗ ಸಾರ್ವಜನಿಕ, ರೈತರ ಹಿತಾಸಕ್ತಿ ವಿಷಯಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿರುವುದಿಲ್ಲ ಇದು ಭೂ ಅಧಿನಿಯಮ 1961 ಕಲಂ 109(1)ಎ ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದರು.
ಕಂಪನಿಯವರು ಸರ್ಕಾರದ ಬೀಳು ಭೂಮಿಗೆ ರೂ. 8,00,000 ರಂತೆ ಖರೀದಿಸಿ, ರೈತರ ಫಲವತ್ತಾದ ಕೃಷಿ ಜಮೀನುಗಳಿಗೆ ರೂ. 3,50,000 ನೀಡಿ ರೈತರಿಗೆ ವಂಚನೆ ಮಾಡಿರುತ್ತಾರೆ. ಸೇಡಂ ತಾಲೂಕಿನ ನೀಲಹಳ್ಳಿ, ಕೊಂಕನಹಳ್ಳಿ ಮತ್ತು ಬೀರನಳ್ಳಿ ಗ್ರಾಮಗಳಲ್ಲಿ ದಾಲ್ಮಿಯಾ ಸಿಮೆಂಟ್ ಕಂಪನಿಯವರು 2008 ರಲ್ಲಿಯೇ ರೈತರ ಫಲವತ್ತಾದ ಕೃಷಿ ಜಮೀನುಗಳಿಗೆ ರೂ. 8,00,000 ರಂತೆ ಖರೀದಿಸಿದ್ದಾರೆ ಹಾಗೂ ಭೂಮಿ ಕಳೆದುಕೊಂಡ ರೈತರ ಕುಟುಂಬಗಳಿಗೆ ಉದ್ಯೋಗವನ್ನು ನೀಡಿರುತ್ತಾರೆ. ಅಲ್ಟ್ರಾಟೆಕ್ ಸಿಮೆಂಟ ಲಿಮಿಟೆಡ್ ಕಂಪನಿಯವರು ರೈತರ ಕುಟುಂಬದ ಸದಸ್ಯರಿಗೆ ಡಾ. ಸರೋಜಿನಿ ಮಹಿಷಿ ವರದಿಯಂತೆ ವಿದ್ಯಾರ್ಹತೆಗೆ ಅನುಗುಣವಾಗಿ ಕಂಪನಿಯಲ್ಲಿ ಖಾಯಂ ಉದ್ಯೋಗ ನೀಡಲು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಯವರು 2012 ರಲ್ಲಿ ಆದೇಶಿಸಿದ್ದರು. ಆದರೆ ಕಂಪನಿಯವರು ಭೂಮಿ ಕಳೆದುಕೊಂಡ ರೈತರ ಕುಟುಂಬಗಳಿಗೆ ಉದ್ಯೋಗ ನೀಡಿರುವುದಿಲ್ಲ ಎಂದು ತಿಳಿಸಿದರು.
ಕಂಪನಿಯವರು ಜಿಲ್ಲೆಯ ಭೂಮಿ, ಅದಿರು, ನೀರು, ಇನ್ನಿತರ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕಂಪನಿಯವರು ರೈತರ ಮತ್ತು ಸಾರ್ವಜನಿಕ ಹಿತ ಕಾಯುತ್ತಿಲ್ಲ. ಇದಕ್ಕಾಗಿ ಭೂಮಿ ಕಳೆದುಕೊಂಡ ರೈತರು 2015 ರಿಂದ 2020 ರ ವರೆಗೆ ಸೇಡಂನ ಸಹಾಯಕ ಆಯುಕ್ತರ ಕಚೇರಿಯ ಎದುರುಗಡೆ ಚಳಿ, ಮಳೆ, ಗಾಳಿ ಲೆಕ್ಕಿಸದೇ 1712 ದಿನಗಳ ಧರಣಿ ಸತ್ಯಾಗ್ರಹ ಮಾಡಿರುತ್ತಾರೆ. ಈ ಧರಣಿಯಲ್ಲಿ 22 ಜನ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ರೈತರು ನಿರಂತರವಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೈಗಾರಿಕಾ ಸಚಿವರನ್ನು ಸಂಪರ್ಕಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಭೆಯ ಗಮನ ಸೆಳೆದರು.
ಮುಖ್ಯಮಂತ್ರಿಗಳಿಗೆ, ಸೇಡಂ ಹಾಗೂ ಕಲಬುರಗಿಯಲ್ಲಿ ರೈತರಿಗೆ ನ್ಯಾಯ ಒದಗಿಸಲು ಮನವಿ ಸಲ್ಲಿಸಲಾಗಿತ್ತು, ಆದರೆ, ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿರುವುದಿಲ್ಲ. ಇದು ಕಂಪನಿಯ ರೈತ ವಿರೋಧಿ ಧೋರಣೆಯನ್ನು ತೋರಿಸುತ್ತದೆ. ಈ ಹಿನ್ನಲೆಯಲ್ಲಿ, ಹಂಗನಹಳ್ಳಿ, ಊಡಗಿ, ಹುಡಾ (ಬಿ) ಮತ್ತು ನೃಪತುಂಗ ನಗರ ಗ್ರಾಮಗಳ ರೈತರ ಜಮೀನುಗಳಿಗೆ ಪರಿಹಾರದ ಉಳಿದ ಮೊತ್ತ ರೂ. 4.50 ಲಕ್ಷ ನೀಡಬೇಕು. ಧರಣಿ ನಿರತ ರೈತರು ಪ್ರಾಣ ಕಳೆದುಕೊಂಡಿದ್ದರಿಂದ ಪ್ರತಿ ಕುಟುಂಬಕ್ಕೆ ರೂ. 10 ಲಕ್ಷ ಪರಿಹಾರ ನೀಡಬೇಕು. ಡಾ. ಸರೋಜಿನಿ ಮಹಿಷಿ ವರದಿಯ ಆದೇಶದಂತೆ ಕಂಪನಿಯು ಭೂಮಿ ಕಳೆದುಕೊಂಡ ಪ್ರತಿ ರೈತರ ಕುಟುಂಬಕ್ಕೆ ಒಂದು ಖಾಯಂ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದ್ದಾರೆ.