ಜಾತ್ರೆಯ ನಿಮಿತ್ತ ಪೂರ್ವಭಾವಿ ಸಭೆ
ನಾಗಾವಿ ಯಲ್ಲಮ್ಮ ಜಾತ್ರೆಯ ಯಶಸ್ವಿಗೆ ಎಲ್ಲರೂ ಕೈಜೋಡಿಸಿ: ಹಿರೇಮಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಿಯ ಜಾತ್ರಾ (ಪಲ್ಲಕ್ಕಿ) ಮಹೋತ್ಸವಕ್ಕೆ ಬೇಕಾದ ಈಗಾಗಲೇ ಎಲ್ಲ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಜಾತ್ರೆಯ ಯಶಸ್ವಿಗೆ ಎಲ್ಲ ಸಮಾಜಗಳ ಮುಖಂಡರು, ಸಾರ್ವಜನಿಕರು ಕೈಜೋಡಿಸಬೇಕು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಮನವಿ ಮಾಡಿದರು.
ಪಟ್ಟಣದ ತಾಲೂಕು ಪಂಚಾಯಿತ್ ಸಭಾಂಗಣದಲ್ಲಿ ಅಕ್ಟೋಬರ್ 17 ರಂದು ನಡೆಯಲಿರುವ ನಾಗಾವಿ ಯಲ್ಲಮ್ಮ ಜಾತ್ರೆ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತ್ರೆಗೆ ಸಂಬಂಧಿಸಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಈ ನಿಟ್ಟಿನಲ್ಲಿ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ದೇವಿಯ ಪಲ್ಲಕ್ಕಿ ಮಹೋತ್ಸವ ಹೋಗುವ ಮಾರ್ಗದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಗಿಡ ಗಂಟಿ ಕಡೆಸಿ ಸ್ವಚ್ಛತೆ ಹಾಗೂ ದೇವಸ್ಥಾನದ ಸುತ್ತ ಮುತ್ತ ಸ್ವಚ್ಛತೆ ಕಾರ್ಯ, ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಅವರಿಗೆ ತಹಸೀಲ್ದಾರ್ ಸೂಚಿಸಿದರು. ವಿದ್ಯುತ್ ಸರಬರಾಜು ಮತ್ತು ವ್ಯವಸ್ಥೆ ಕುರಿತು ಜೆಸ್ಕಾಂ ಅಧಿಕಾರಿಗೆ ಹಾಗೂ ಜಾತ್ರೆ ಪ್ರಯುಕ್ತ ಹೆಚ್ಚು ಬಸ್ಸುಗಳು ಒಡಿಸುವಂತೆ ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗುವುದು, ಬೆಂಕಿ ಅವಘಡ ಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಗ್ನಿಶಾಮಕ ಅಧಿಕಾರಿಗೆ ಸೂಚಿಸಿದರು. ಅಂಬ್ಯುಲೆನ್ಸ್ ಜೊತೆಗೆ ವೈದ್ಯರ ತಂಡದ ವ್ಯವಸ್ಥೆ ಮಾಡಲು ಆರೋಗ್ಯ ಅಧಿಕಾರಿಗೆ ಮತ್ತು ದೇವಸ್ಥಾನದ ಸುತ್ತ ಮದ್ಯೆ ಮಾರಾಟ ಆಗದಂತೆ ಅಬಕಾರಿ ಇಲಾಖೆಗೆ ಪತ್ರ ಬರೆಯಲಾಗುವುದು ಎಂದರು.
ಬಾಬು ಕಾಶಿ ಮಾತನಾಡಿ, ಪೂರ್ವಭಾವಿ ಸಭೆಯ ನೋಟಿಸ್ ನಲ್ಲಿ ಕೆಲವೇ ಸಮಾಜಗಳ ಹೆಸರು ಹಾಕಿದ್ದಿರಿ ಇದು ಸರಿಯಲ್ಲ ಎಲ್ಲ ಸಾಮಾಜಗಳಿಗೆ ಅಹ್ವಾನ ನೀಡಿ, ಜಾತ್ರೆ ನಿಮಿತ್ತ ಸಂಚಾರಿ ಶೌಚಾಲಯ ವ್ಯವಸ್ಥೆ ಮಾಡಿ, ಹುಂಡಿಯಲ್ಲಿ ಸಂಗ್ರಹವಾದ ಹಣದ ಖರ್ಚು ವೆಚ್ಚದ ಮಾಹಿತಿ ನೀಡಿ ಎಂದರು. ಮಲ್ಲರೆಡ್ಡಿ ಗೋಪಸೇನ್ ಮಾತನಾಡಿ, ಜಾತ್ರೆಗೆ ಲಕ್ಷಾಂತರ ಜನ ಬರುತ್ತಾರೆ ಆದರೆ ನೀವು 10 ಶೌಚಾಲಯ ವ್ಯವಸ್ಥೆ ಮಾಡಿದರೆ ಹೇಗೆ ಇದರ ಸಂಖ್ಯೆ ಹೆಚ್ಚು ಮಾಡಿ ಮತ್ತು ಕುಡಿಯುವ ನೀರಿಗಾಗಿ ಬರೀ 4 ನಳಗಳು ಇವೆ ಯಾರಿಗೆ ಸಾಲುತ್ತದೆ ಹೀಗಾಗಿ 100 ನಳಗಳ ವ್ಯವಸ್ಥೆ ಮಾಡಿ ಎಂದರು.
ಚಂದರ್ ಚವ್ಹಾಣ ಮಾತನಾಡಿ, ನಾಗಾವಿ ನಾಡು ನಾಟ್ಯ ಸಂಘದ ವತಿಯಿಂದ ಎರಡು ದಿನಗಳ ನಾಟಕ ಪ್ರದರ್ಶನಕ್ಕೆ ದೇವಸ್ಥಾನದ ಪಕ್ಕದಲ್ಲಿ ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಂಡರು. ಸ್ಥಳ ಪರಿಶೀಲನೆ ನಡೆಸಿ ಅನುಮತಿ ನೀಡಲಾಗುವುದು ಎಂದು ತಹಸೀಲ್ದಾರ್ ಹೇಳಿದರು.
ಆನಂದ ರಾವೂರಕರ್ ಮಾತನಾಡಿ, ಎಲ್ಲ ಯುವಕರು ಸೇರಿ ಜಾತ್ರೆಯ ನಿಮಿತ್ಯ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೀಪಾಲಂಕಾರ ಮಾಡಲು ಮತ್ತು ಹೇಲಿಪ್ಯಾಡ್ ಮೂಲಕ ಹೂ ಚೆಲ್ಲಲು ನಿರ್ಧರಿಸಲಾಗಿದೆ ಇದಕ್ಕೆ ಅನುಮತಿ ನೀಡಬೇಕು ಎಂದರು. ಹೇಲಿಪ್ಯಾಡ್ ಗೆ ಜಿಲ್ಲಾಧಿಕಾರಿ ಅನುಮತಿ ನೀಡಬೇಕು ಎಂದರು. ಸುರೇಶ್ ಬೆನಕನಳ್ಳಿ ಮಾತನಾಡಿ, ಯುವಕರು ಎಲ್ಲರೂ ಒಗ್ಗೂಡಿ ದೀಪಾಲಂಕಾರ ಮಾಡುವ ಉತ್ಸಾಹದಲ್ಲಿದ್ದಾರೆ ಅವರಿಗೆ ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡಿ ಎಂದರು. ಶರಣಪ್ಪ ನಾಟೀಕಾರ್ ಮಾತನಾಡಿ, ದೂರದಿಂದ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದರು.
ಭೀಮಾಶಂಕರ ಹೋಳಿಕಟ್ಟಿ ಮಾತನಾಡಿ, ದೇವಸ್ಥಾನದ ಹುಂಡಿಯಲ್ಲಿ ಜಮಾವಾದ ಹಣದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಪ್ರಮುಖವಾಗಿ ಶೌಚಾಲಯ, ಕುಡಿಯುವ ನೀರು, ಸ್ವಚ್ಛತೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದರು. ಚಂದ್ರಶೇಖರ ಕಾಶಿ, ವಿಠಲ್ ಕಟ್ಟಿಮನಿ, ಭೀಮಸಿಂಗ್ ಚವ್ಹಾಣ, ಪ್ರಲ್ಹಾದ ವಿಶ್ವಕರ್ಮ, ಸಂಜು ಕಾಶಿ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮಾತನಾಡಿ, ಜಾತ್ರೆ ಮುಗಿಯುವವರೆಗೂ ದಿನದ 24 ಗಂಟೆ ಕಾಲ ಸ್ವಚ್ಛತೆ ಕಾರ್ಯ ಮಾಡಲಾಗುವುದು, ಮೋಬೈಲ್ ಪೈಲೆಟ್, ಫೊಕಸ್ ಲೈಟಿಂಗ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಸೇರಿದಂತೆ ದೇವಸ್ಥಾನಕ್ಕೆ ಹೋಗುವ ರಸ್ತೆ ಮತ್ತು ಸುತ್ತಮುತ್ತ ಗಿಡಗಂಟಿಗಳು ತೆರುವುಗೊಳಿಸಿ ಸ್ವಚ್ಛತೆ ಮಾಡಲಾಗುವುದು ಎಂದು ಹೇಳಿದರು.
ಸಿಪಿಐ ಚಂದ್ರಶೇಖರ ತಿಗಡಿ ಮಾತನಾಡಿ, ಪಾರ್ಕಿಂಗ್ ವ್ಯವಸ್ಥೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಭಕ್ತಾದಿಗಳಿಗೆ ತೊಂದರೆ ಆಗದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು, ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ರತ್ನಾಕರ್ ನಾಯಕ ಮಾತನಾಡಿ, ನಾಗಾವಿ ಯಲ್ಲಮ ಜಾತ್ರಾ ಮಹೋತ್ಸವ ಇದು ಊರಿನ ಜಾತ್ರೆ ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು, ಪಲ್ಲಕ್ಕಿ ಸುತ್ತ ಪೊಲೀಸ್ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ಗ್ರೇಡ್ -2 ತಹಸೀಲ್ದಾರ್ ರಾಜಕುಮಾರ ಮರತೂರಕರ್, ಪಿಆರ್ ಇ ಬಾಲಕೃಷ್ಣ, ಪಿಎಸ್ಐ ಚಂದ್ರಾಮಪ್ಪ, ಜೆಸ್ಕಾಂ, ಅಗ್ನಿಶಾಮಕ ಅಧಿಕಾರಿಗಳು, ಮುಖಂಡರಾದ ಈರಪ್ಪ ಭೋವಿ, ಲಕ್ಷ್ಮೀಕಾಂತ ತಾಂಡೂರಕರ್, ಕಿಶನ್ ರಾಠೋಡ ಸೇರಿದಂತೆ ಅನೇಕರು ಇದ್ದರು. ಶಿರಸ್ತೇದಾರ್ ಅಶ್ವಥನಾರಾಯಣ ಸ್ವಾಗತಿಸಿದರು.
“ದೇವಸ್ಥಾನದ ಖಾತೆಯಲ್ಲಿ 2 ಕೋಟಿ ಹಣ ಜಮಾ ಇದೆ, ಕಳೆದ ಬಾರಿ ಜಾತ್ರೆಗಾಗಿ 3 ಲಕ್ಷ ಖರ್ಚು ಮಾಡಲಾಗಿದೆ ಈ ಬಾರಿ ಸುಣ್ಣ ಬಣ್ಣ ಕ್ಕಾಗಿ 1.75 ಲಕ್ಷ ಬಿಡುಗಡೆ ಮಾಡಲಾಗಿದೆ ಇನ್ನೂ ನಿಯಮಾನುಸಾರ ಹಣ ಖರ್ಚು ಮಾಡಲಾಗುವುದು”.-ನಾಗಯ್ಯ ಹಿರೇಮಠ ತಹಸೀಲ್ದಾರ್ ಚಿತ್ತಾಪುರ.