ಚಿತ್ತಾಪುರ ತಾಪಂ ಸಭಾಂಗಣದಲ್ಲಿ ಪೂರ್ವಭಾವಿ ಸಭೆ | ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಯಶಸ್ವಿಗೆ ಎಲ್ಲರೂ ಕೈಜೋಡಿಸಿ: ಹಿರೇಮಠ ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಯಶಸ್ವಿಗೆ ಅಧಿಕಾರಿಗಳ ಜೊತೆಗೆ ತಾಲೂಕಿನ ಎಲ್ಲಾ ಸಮಾಜದ ಮುಖಂಡರು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ತಹಸೀಲ್ದಾರ್ ನಾಗಯ್ಯ ಹಿರೇಮಠ ಕರೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಶ್ರೀ ನಾಗಾವಿ ಯಲ್ಲಮ್ಮ ಪಲ್ಲಕ್ಕಿ (ಜಾತ್ರಾ ಮಹೋತ್ಸವ) ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾನು ಅಧಿಕಾರಿ ಅಲ್ಲ ಒಬ್ಬ ದೇವಿಯ ಭಕ್ತನಾಗಿದ್ದು, ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಪಲ್ಲಕ್ಕಿ ಉತ್ಸವಕ್ಕೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವುದರಿಂದ ಟ್ರಾಫಿಕ್ ಸಮಸ್ಯೆ ಆಗದಂತೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡುವ ಮೂಲಕ ಭಕ್ತಾದಿಗಳಿಗೆ ತೊಂದರೆ ಆಗದಂತೆ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ದೇವಸ್ಥಾನಕ್ಕೆ ಹೋಗುವ ರಸ್ತೆ ಎರಡು ಬದಿ ಗಿಡಗಂಟಿಗಳು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು, ಕುಡಿಯುವ ನೀರು ಹಾಗೂ ಮೊಬೈಲ್ ಟೋಯಿಲೆಟ್ ವ್ಯವಸ್ಥೆ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಅವರಿಗೆ ಸೂಚಿಸಿದರು. ವಿದ್ಯುತ್ ವ್ಯವಸ್ಥೆ ಕಲ್ಪಿಸಿ ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಜೆಸ್ಕಾಂ ಅಧಿಕಾರಿಗೆ ಸೂಚಿಸಿದರು. ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಆದೇಶಿಸಿದರು. ಜಾತ್ರೆಯ ಸಮಯದಲ್ಲಿ ಯಾವುದೇ ಬೆಂಕಿ ಅನಾಹುತವಾಗದಂತೆ ಅಗ್ನಿಶಾಮಕ ಅಧಿಕಾರಿಗಳು ಕ್ರಮ ವಹಿಸಬೇಕು, ಜಾತ್ರಾ ವಿಶೇಷ ಸಾರಿಗೆ ಬಸ್ಸುಗಳ ವ್ಯವಸ್ಥೆ ಮಾಡಬೇಕು ಎಂದು ಬಸ್ ಘಟಕ ವ್ಯವಸ್ಥಾಪಕರಿಗೆ ತಿಳಿಸಿದರು. ಅಕ್ರಮ ಮದ್ಯ ಮಾರಾಟ ಆಗದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ತಹಸೀಲ್ದಾರ್ ತಾಕೀತು ಮಾಡಿದರು.
ಭೀಮಣ್ಣ ಕರದಳ್ಳಿ, ಮಲ್ಲರೆಡ್ಡಿ ಗೋಪಸೇನ್, ಈರಪ್ಪ ಭೋವಿ ಅವರು ಮಾತನಾಡಿ, ನಾಗಾವಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಟಿಪ್ಪರ್ ಗಳ ಓಡಾಟದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ ಇದರಿಂದ ಭಕ್ತಾದಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಹೀಗಾಗಿ ಕೂಡಲೇ ದುರಸ್ತಿ ಮಾಡಬೇಕು ಹಾಗೂ ವಿದ್ಯುತ್ ವ್ಯವಸ್ಥೆ, ರಸ್ತೆ ಬದಿ ಗಿಡಗಂಟಿಗಳು ಕಡಿಸಿ ಸ್ವಚ್ಛತೆ ಮಾಡಬೇಕು ಎಂದು ಆಗ್ರಹಿಸಿದರು.
ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಮಾತನಾಡಿ, ಪುರಸಭೆಗೆ ವಹಿಸಿದ್ದ ಎಲ್ಲ ಕೆಲಸಗಳು ಅಚ್ಚುಕಟ್ಟಾಗಿ ಮಾಡಲಾಗುವುದು ಎಂದರು, ಸಿಪಿಐ ಎಸ್.ಸಿ ಪಾಟೀಲ, ಪಿಎಸ್ಐ ಮಂಜುನಾಥ ರೆಡ್ಡಿ ಅವರು ಮಾತನಾಡಿ ಟ್ರಾಫಿಕ್ ಸಮಸ್ಯೆ ಆಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರತ್ನಾಕರ ನಾಯಕ ಮಾತನಾಡಿ, ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ ಹೀಗಾಗಿ ಎಲ್ಲರೂ ಇದಕ್ಕೆ ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಜಾತ್ರೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಚಂದ್ರಶೇಖರ್ ಅವಂಟಿ, ವಿಠಲ್ ಕಟ್ಟಿಮನಿ, ನರಸಪ್ಪ ಭೋವಿ, ಶರಣಪ್ಪ ಕೋರವಾರ, ಅಂಬಾದಾಸ್ ತುರೆ, ಭಾಸ್ಕರ್ ಪುಣೆ, ಶರಣಪ್ಪ ನಾಟೀಕಾರ, ಸುರೇಶ್ ಬೆನಕನಳ್ಳಿ, ಭೀಮಾಶಂಕರ ಹೋಳಿಕಟ್ಟಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಭೀಮಣ್ಣ ಸಾಲಿ, ನಾಗರೆಡ್ಡಿ ಗೋಪಸೇನ್, ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಸುರೇಶ್ ಅಳ್ಳೋಳ್ಳಿ, ಲಕ್ಷ್ಮೀಕಾಂತ್ ತಾಂಡೂರಕರ್, ಶಿವಾಜಿ ಕಾಶಿ, ರಾಮಲಿಂಗ ಬಾನರ್, ಶಿವಕಾಂತ್ ಬೆಣ್ಣೂರಕರ್, ಸಾಬಣ್ಣ ಹೊಳಿಕಟ್ಟಿ, ಭೀಮರಾಯ ಹೊತಿನಮಡಿ, ಶ್ರೀನಿವಾಸ ಪಾಸ್ಮೆ, ಮಹೇಶ್ ಕಾಶಿ, ರಾಮು ಹರವಾಳ, ನಾಗೇಂದ್ರ ಬುರ್ಲಿ, ಸಂಜಯ್ ಬುಳಕರ್, ಬಸವರಾಜ ಮುಡಬೂಳಕರ್ ಸೇರಿದಂತೆ ಸಿಬ್ಬಂದಿಗಳಾದ ಅಶ್ವತ್ಥ ನಾರಾಯಣ, ಮೈನೋದ್ದಿನ್, ಮಂಜುನಾಥ, ಮಾರ್ಥಂಡ ಮುಡಬೂಳ, ಶಂಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿಎ ಸಂಗಮೇಶ ನಿರೂಪಿಸಿದರು, ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್ ವಂದಿಸಿದರು.
“ನಾಗಾವಿ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಈಗಾಗಲೇ 2.19 ಎಕರೆ ಭೂಮಿ ಹಾಗೂ ಪುರಾತತ್ವ ಇಲಾಖೆಗೆ ಸಂಬಂಧಿಸಿದಂತೆ 106.32 ಎಕರೆ ಭೂಮಿಯನ್ನು ಗುರುತಿಸಿ ತಂತಿ ಬೇಲಿ ಅಳವಡಿಸುವ ಕಾರ್ಯ ನಡೆದಿದೆ, ಈಗಾಗಲೇ ಅಭಿವೃದ್ಧಿಯ ನೀಲನಕ್ಷೆ ಸಿದ್ದವಾಗಿದೆ ಜಾತ್ರೆ ಮುಗಿದ ಬಳಿಕ ಅಭಿವೃದ್ಧಿ ಕೆಲಸಗಳು ಆಗಲಿವೆ”.-ನಾಗಯ್ಯ ಹಿರೇಮಠ ತಹಸೀಲ್ದಾರ್ ಚಿತ್ತಾಪುರ.

