ಮೇಘಾಲಯದ ರಾಜ್ಯಪಾಲರಿಂದ ಉದ್ಘಾಟನೆ
ನಾಳೆ ನಾಲವಾರದ ಡಾ.ಸಿದ್ಧತೋಟೇಂದ್ರ ಶ್ರೀಗಳ ಜನ್ಮ ಷಷ್ಠ್ಯಬ್ದಿ, ಸುವರ್ಣ ಭವನ ಉದ್ಘಾಟನಾ ಸಮಾರಂಭ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಹಾಗೂ ಪ್ರಸ್ತುತ ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಷಷ್ಠ್ಯಬ್ದಿ ಮಹೋತ್ಸವ ಹಾಗೂ ಶ್ರೀ ಸಿದ್ಧತೋಟೇಂದ್ರ ಸುವರ್ಣ ಭವನದ ಉದ್ಘಾಟನಾ ಸಮಾರಂಭ ಅ.11 ಮಹಾನವಮಿಯ ಆಯುಧಪೂಜೆ ದಿನದಂದು ನಡೆಯಲಿದೆ ಎಂದು ಮಠದ ವಕ್ತಾರ ಮಹಾದೇವ ಗಂವಾರ್ ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ 10:30 ಕ್ಕೆ ನಡೆಯುವ ಸಮಾರಂಭದಲ್ಲಿ, ವರ್ಷಪೂರ್ತಿ ನಡೆಯಲಿರುವ ಪೂಜ್ಯರ ಷಷ್ಠ್ಯಬ್ದಿ ಸಂಭ್ರಮಕ್ಕೆ ಚಾಲನೆ ಹಾಗೂ ಭವ್ಯವಾಗಿ ನಿರ್ಮಾಣಗೊಂಡಿರುವ ಶ್ರೀ ಸಿದ್ಧತೋಟೇಂದ್ರ ಸುವರ್ಣ ಭವನದ ಉದ್ಘಾಟನೆಯನ್ನು ಮೇಘಾಲಯದ ರಾಜ್ಯಪಾಲರಾದ ಶ್ರೀ ಸಿ.ಹೆಚ್.ವಿಜಯಶಂಕರ ಅವರು ನೆರವೇರಿಸಲಿದ್ದಾರೆ.
ಪೀಠಾಧಿಪತಿಗಳಾದ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಪಾವನ ಸಾನಿಧ್ಯ ಹಾಗೂ ಕ್ಷೇತ್ರದ ಶಾಸಕರೂ,ರಾಜ್ಯದ ಗ್ರಾಮೀಣಾಭಿವೃದ್ಧಿ, ಪಂಚಾಯತರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಲಬುರಗಿ ಸುಲಫಲ ಮಠ ಹಾಗೂ ಶ್ರೀಶೈಲ ಸಾರಂಗಮಠದ ಜಗದ್ಗುರು ಶ್ರೀ ಸಾರಂಗಧರೇಶ್ವರ ಮಹಾಸ್ವಾಮಿಗಳಿಗೆ ವಿಶೇಷ ಸನ್ಮಾನ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಸಣ್ಣ ಕೈಗಾರಿಕಾ ಖಾತೆ ಸಚಿವ ಶರಣಬಸಪ್ಪಗೌಡ ದರ್ಶನಾಪೂರ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕೆಕೆಆರಡಿಬಿ ಅಧ್ಯಕ್ಷ ಡಾ.ಅಜಯ ಧರ್ಮಸಿಂಗ್, ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರ, ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮಡು, ಎಂ.ವೈ.ಪಾಟೀಲ, ಶರಣಗೌಡ ಕಂದಕೂರ, ರಾಜಾ ವೇಣುಗೋಪಾಲ ನಾಯಕ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಶಶೀಲ ಜಿ ನಮೋಶಿ, ಡಾ.ಚಂದ್ರಶೇಖರ ಪಾಟೀಲ ಹುಮನಾಬಾದ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ರಾಜಕುಮಾರ ಪಾಟೀಲ ತೇಲ್ಕೂರ, ಗುರು ಪಾಟೀಲ ಶಿರವಾಳ, ಕಲಬುರಗಿ ಮತ್ತು ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ ಪಾಟೀಲ ರದ್ದೇವಾಡಗಿ, ಅಮೀನರೆಡ್ಡಿ ಯಾಳಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಆಗಮಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ರಾಜ್ಯಸಭೆ ಮಾಜಿ ಸದಸ್ಯ, ಸಾಮಾಜಿಕ ಚಿಂತಕರಾದ ಡಾ.ಬಸವರಾಜ ಪಾಟೀಲ ಸೇಡಂ, ಶ್ರೀಮಠದ ಸದ್ಭಕ್ತರಾದ ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ ಭಾಗವಹಿಸುವರು.
ಅಂದು ಸಂಜೆ ಲಿಂಗೈಕ್ಯ ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ, ಕರ್ತೃ ಗದ್ದುಗೆಗೆ ಮಹಾಮಂಗಳಾರತಿ, ಷಷ್ಠ್ಯಬ್ದಿ ಸಂಭ್ರಮದಲ್ಲಿರುವ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳಿಗೆ ಭಕ್ತರಿಂದ ಗುರುವಂದನೆ ಹಾಗೂ ತುಲಾಭಾರ ಸೇವೆ ನಡೆಯಲಿದೆ ಹಲವಾರು ಪೂಜ್ಯರು, ಕವಿ-ಕಲಾವಿದರು ಭಾಗವಹಿಸಲಿದ್ದಾರೆ.
ಈ ವಿಶೇಷ ಸಮಾರಂಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಲು ಮಠದ ವಕ್ತಾರ ಮಹಾದೇವ ಗಂವ್ಹಾರ ಕೋರಿದ್ದಾರೆ.