ಮೇಘಾಲಯ ರಾಜ್ಯಪಾಲರಿಂದ ಡಾ.ಸಿದ್ಧತೋಟೇಂದ್ರ ಶ್ರೀಗಳ ಷಷ್ಠ್ಯಬ್ದಿ ಸಂಭ್ರಮಕ್ಕೆ ಚಾಲನೆ
ನಾಲವಾರ ಮಠ ನಾಡಿನ ಆಧ್ಯಾತ್ಮಿಕ ಶಕ್ತಿ ಕೇಂದ್ರ : ವಿಜಯಶಂಕರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠವು ಲಕ್ಷಾಂತರ ಭಕ್ತರನ್ನು ಉದ್ಧರಿಸಿದ ನಾಡಿನ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದೆ ಎಂದು ಮೇಘಾಲಯದ ರಾಜ್ಯಪಾಲರಾದ ಸಿ.ಹೆಚ್.ವಿಜಯಶಂಕರ್ ಹೇಳಿದರು.
ನಾಲವಾರ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ 60 ನೇ ಜನ್ಮದಿನದ ಷಷ್ಠ್ಯಬ್ದಿ ಸಮಾರಂಭ ಹಾಗೂ ಸಿದ್ಧತೋಟೇಂದ್ರ ಸುವರ್ಣ ಭವನ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ನಾಲವಾರ ಮಠ ಬೇಡಿದವರಿಗೆ ಬೇಡಿದ್ದನ್ನು ನೀಡುವ ಮತ್ತು ನೊಂದು ಬಂದವರ ನೋವನ್ನು ಕಳೆದು ಸನ್ಮಾರ್ಗಕ್ಕೆ ಕೊಂಡೊಯ್ಯುವ ಪುಣ್ಯಭೂಮಿಯಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಠದ ಪೀಠಾಧಿಪತಿಗಳಾದ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಮಾಡುತ್ತಿರುವ ಧಾರ್ಮಿಕ ಮತ್ತು ಸಾಮಾಜಿಕ ಸೇವೆ ಇತರ ಮಠ-ಮಾನ್ಯಗಳಿಗೆ ಮಾದರಿಯಾಗಿದೆ ಎಂದರು.
ಜನಸಾಮಾನ್ಯರು ಧರ್ಮ ಮಾರ್ಗದಲ್ಲಿ ನಡೆಯುವಂತೆ ಸಂಸ್ಕಾರ ನೀಡಿ, ಅವರ ಕಷ್ಟ ಕಾರ್ಪಣ್ಯಗಳನ್ನು ಕಳೆದು ಅವರ ಬಾಳಿಗೆ ಬೆಳಕು ನೀಡುವ ಕಾರ್ಯ ಇಲ್ಲಿನ ಮಠ ಹಾಗೂ ಮಠಾಧೀಶರು ಮಾಡುತ್ತಿರುವುದನ್ನು ದೂರದಿಂದಲೇ ಗಮನಿಸುತ್ತಿದ್ದೆ. ಪೂರ್ವ ಜನ್ಮದ ಸುಕೃತದ ಫಲದಿಂದ ನನಗೆ ಪೂಜ್ಯರ ದರ್ಶನ ಭಾಗ್ಯ ದೊರೆತಿದೆ ಎಂದು ಭಾವುಕರಾದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮ ಅವರು ನನಗೆ ಗುರುತರ ಜವಾಬ್ದಾರಿ ನೀಡಿದ್ದು, ರಾಜ್ಯಪಾಲ ಹುದ್ದೆಗೆ ಘನತೆ ತಂದುಕೊಡುವ, ರಾಜಭವನವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯಲು ಸೂಚಿಸಿದ್ದಾರೆ. ಅದರಂತೆ ನಾನು ಮೇಘಾಲಯ ರಾಜ್ಯದಲ್ಲಿ ಕಾರ್ಯಪ್ರವೃತ್ತನಾಗಿದ್ದು, ಅಂತಹ ಕಾರ್ಯದಲ್ಲಿ ಯಶಸ್ಸು ನೀಡುವಂತೆ ಕೋರಿಸಿದ್ಧೇಶ್ವರ ಮಹಾಸ್ವಾಮಿಯಲ್ಲಿ ಸಂಕಲ್ಪ ಮಾಡಿಕೊಂಡಿದ್ದೇನೆ. ಮತ್ತೆ ಪರಿವಾರ ಸಮೇತವಾಗಿ ನಾಲವಾರ ಶ್ರೀಮಠದ ದರ್ಶನಕ್ಕೆ ಬರುವೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯಸಭೆಯ ಮಾಜಿ ಸದಸ್ಯ ಡಾ.ಬಸವರಾಜ ಪಾಟೀಲ ಸೇಡಂ ಮಾತನಾಡಿ, ನಾಲವಾರ ಮಠದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಪ್ರಜ್ಞಾವಂತರಾಗಿದ್ದು, ಬಡವರ, ದೀನರ ಸೇವೆಯನ್ನು ಮಾಡುತ್ತಾ ಸ್ವಾಮಿತ್ವಕ್ಕೆ ಬೆಲೆ ತಂದುಕೊಡುತ್ತಿದ್ದಾರೆ. ತಮ್ಮ ಅರವತ್ತು ವರ್ಷಗಳ ಸಾರ್ಥಕ ಬದುಕಿನಲ್ಲಿ ಹತ್ತು ಹಲವು ಜನೋಪಯೋಗಿ ಕಾರ್ಯಗಳ ಮೂಲಕ ಕಲ್ಯಾಣ ಕರ್ನಾಟಕ ಭಾಗಕ್ಕೆ ನಾಡಿನಲ್ಲಿ ಒಳ್ಳೆಯ ಅಭಿಪ್ರಾಯ ಬರುವಂತೆ ಮಾಡುತ್ತಿದ್ದಾರೆ ಎಂದರು.
ಪೂಜ್ಯರು 60 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಸಂತಸದ ವಿಷಯ. ಮನುಷ್ಯನ ಜೀವನದಲ್ಲಿ ಅರವತ್ತು ವರ್ಷ ಎನ್ನುವುದು ಬಹುಮುಖ್ಯ ಘಟ್ಟವಾಗಿದ್ದು, ಮುಂಬರುವ ದಿನಗಳಲ್ಲಿ ಪೂಜ್ಯರಿಂದ ಇನ್ನೂ ಅದ್ವಿತೀಯ ಸಾಧನೆಯಾಗಲಿ ಎಂದರು.
ಕಲಬುರಗಿ ಸುಲಫಲ್ ಮಠ ಹಾಗೂ ಶ್ರೀಶೈಲ ಸಾರಂಗ ಮಠದ ಜಗದ್ಗುರು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾಲವಾರ ಶ್ರೀಮಠದ ಹಾಗೂ ಶ್ರೀಗಳು ಕಳೆದ ನಾಲ್ಕು ದಶಕಗಳಿಂದ ಮಾಡುತ್ತಿರುವ ಸೇವೆ ಅನುಪಮವಾದದ್ದು. ಈ ಭಾಗದಲ್ಲಿ ಮೊಟ್ಟಮೊದಲ ಬಾರಿಗೆ ಯಾವ ಮಠದಲ್ಲಿಯೂ ನಡೆಯದೇ ಇದ್ದ ಶಿವಾನುಭವ ಚಿಂತನ ಕಾರ್ಯಕ್ರಮವನ್ನು ಮಠದಲ್ಲಿ ಪ್ರಾರಂಭಿಸಿದರು. ತಮ್ಮ ಮಠದ ಮೂಲಕ 90 ರ ದಶಕದಲ್ಲಿಯೇ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಾಮಿಗಳು ಹೇಗಿರಬೇಕು ಎಂಬುದನ್ನು ನಾಡಿಗೆ ತೋರಿಸಿಕೊಟ್ಟರು ಎಂದರು.
ನಾಡಿನ ಭಕ್ತ ಬಳಗದ ಪರವಾಗಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳನ್ನು ರಾಜ್ಯಪಾಲರು ಸತ್ಕರಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಸಾರಂಗಮಠದ ಪೀಠಾಧಿಪತಿಗಳಾಗಿ ದಶಮಾನೋತ್ಸವ ಪೂರೈಸಿದ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ, ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರ, ಶರಣಗೌಡ ಕಂದಕೂರ, ಬಸವರಾಜ ಮತ್ತಿಮುಡ್, ಅಲ್ಲಮಪ್ರಭು ಪಾಟೀಲ ನೆಲೋಗಿ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ತೊಗರಿ ಮಂಡಳಿ ಮಾಜಿ ಅಧ್ಯಕ್ಷರುಗಳಾದ ಲಿಂಗಾರೆಡ್ಡಿ ಭಾಸರೆಡ್ಡಿ, ಭಾಗಣ್ಣಗೌಡ ಸಂಕನೂರ, ಮುಖಂಡರಾದ ಅಂಬಾರಾಯ ಅಷ್ಠಗಿ, ಮಹೇಶ ಸ್ವಾಮಿ ಚಿಂಚೋಳಿ, ಮಹಾದೇವ ಗಂವ್ಹಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಾ.ಸಿದ್ಧರಾಜರೆಡ್ಡಿ ಯಾದಗಿರಿ ಪ್ರಾಸ್ತಾವಿಕ ಮಾತನಾಡಿದರು. ಕ್ಯಾ.ಯೋಗಾನಂದ ಮಳಿಮಠ ಸ್ವಾಗತಿಸಿದರು, ಶರಣಕುಮಾರ ಜಾಲಹಳ್ಳಿ ಪ್ರಾರ್ಥಿಸಿದರು, ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.