Oplus_131072

ಮಾತೋಶ್ರೀ ಲಿಂ.ಗೌರಮ್ಮ ತಾಯಿಯವರ ಪುಣ್ಯಸ್ಮರಣೋತ್ಸವದಲ್ಲಿ ಸಂಭ್ರಮದ ಸಾಮೂಹಿಕ ವಿವಾಹ, ನಾಲವಾರ ಮಠದ ಸಮಭಾವ ನಾಡಿಗೆ ಮಾದರಿ: ಡಾ.ಮಂಜಮ್ಮ ಜೋಗತಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ನಾಲವಾರ ಮಠವು ಜಾತಿ ಮತ ಪಂಥ ಲಿಂಗಬೇಧವಿಲ್ಲದೇ ಸರ್ವರನ್ನೂ ಏಕಮುಖವಾಗಿ ಕಂಡು ಎಲ್ಲರನ್ನೂ ಸಮಭಾವದಿಂದ ಕಾಣುವ ಮೂಲಕ ನಾಡಿಗೆ ಮಾದರಿಯಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಹಿರಿಯ ಜಾನಪದ ಕಲಾವಿದೆ ಡಾ.ಮಂಜಮ್ಮ ಜೋಗತಿ ಹೇಳಿದರು.

ತಾಲೂಕಿನ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಶ್ರೀ ಸಿದ್ಧತೋಟೇಂದ್ರ ಸುವರ್ಣ ಭವನದಲ್ಲಿ ಆಯೋಜಿಸಲಾಗಿದ್ದ ಮಾತೋಶ್ರೀ ಲಿಂ.ಗೌರಮ್ಮ ತಾಯಿಯವರ ಎಂಟನೆಯ ಪುಣ್ಯಸ್ಮರಣೋತ್ಸವ ಪ್ರಯುಕ್ತ ಉಚಿತ ಸಾಮೂಹಿಕ ವಿವಾಹ ಹಾಗೂ ಮಾತೋಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ಮಾತೋಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ನಾಲವಾರ ಮಠದ ಪ್ರತಿಷ್ಠಿತ ಮಾತೋಶ್ರೀ ಪ್ರಶಸ್ತಿಯನ್ನು ತೃತೀಯ ಲಿಂಗಿಯಾದ ನನ್ನಂತಹ ಕಲಾವಿದೆಗೆ ನೀಡುವುದರ ಮೂಲಕ ನಾಲವಾರ ಮಠವು ಜಾತಿ-ಧರ್ಮ ಭೇಧ ಮಾತ್ರವಲ್ಲದೆ, ಲಿಂಗಭೇಧವನ್ನೂ ಸಹ ತೊಡೆದು ಹಾಕಿದೆ. ವೇದಿಕೆಯ ಮೇಲೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಮೂಲಕ ಎಲ್ಲರೂ ಸಮಾನರು ಎಂಬ ಭಾವವನ್ನು ಸಾರಿದೆ ಎಂದರು.

ಬೀದಿ ಬದಿಯಲ್ಲಿ ಭಿಕ್ಷಾಟನೆಗೆ ಸೀಮಿತವಾಗಿದ್ದ ಕಲೆಯನ್ನು ರಾಷ್ಟ್ರಮಟ್ಟದಲ್ಲಿ ಕೊಂಡೊಯ್ದ ಸಾರ್ಥಕತೆ ನನಗಿದೆ, ನಾಲವಾರ ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಿಂದ ನೀಡಿರುವ ಮಾತೋಶ್ರೀ ಪ್ರಶಸ್ತಿ ಇಡೀ ಜಗತ್ತಿನ ತೃತೀಯ ಲಿಂಗಿಗಳಿಗೆ ನೀಡಿದ ಗೌರವ ಎಂದು ಭಾವಿಸುತ್ತೇನೆ ಎಂದರು.

ಜಗತ್ತಿನಲ್ಲಿ ನನ್ನ ದೈಹಿಕ ಬದಲಾವಣೆ ಕಾರಣದಿಂದ ಪಡಬಾರದ ನೋವು-ಅವಮಾನಗಳನ್ನು ಅನುಭವಿಸಿ, ಸಾವಿನ ಕಡೆಗೆ ಮುಖ ಮಾಡಿದಾಗ ನನಗೆ ಬದುಕುವ ಆತ್ಮಸ್ಥೈರ್ಯ ನೀಡಿದ್ದು ಜಾನಪದ ಕಲೆ, ಅಂತಹ ಕಲೆ ಇಂದು ನನ್ನನ್ನು ಹಳ್ಳಿಯಿಂದ ದಿಲ್ಲಿಯವರೆಗೆ ತಂದು ನಿಲ್ಲಿಸಿ, ಘನತೆಯ ಬದುಕು ಕಟ್ಟಿಕೊಳ್ಳಲು ಹಾದಿ ಮಾಡಿಕೊಟ್ಟಿದೆ ಎಂದರು.

ಕಾರ್ಯಕ್ರಮವನ್ನು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಉಧ್ಘಾಟಿಸಿ ಮಾತನಾಡಿ, ದಶಕಗಳ ಹಿಂದೆ ಮಠ ಆರ್ಥಿಕವಾಗಿ ಸಧೃಢವಾಗಿರದೇ ಇದ್ದಾಗಲೂ, ಮಠಕ್ಕೆ ಆಗಮಿಸುವ ಸದ್ಭಕ್ತರನ್ನು ಮಕ್ಕಳಂತೆ ಪಾಲನೆ, ಪೋಷಣೆ ಮಾಡಿ ದಾಸೋಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿ ಅನ್ನಪೂರ್ಣೆ ಎಂದೇ ಭಕ್ತರಿಂದ ಕರೆಯಿಸಿಕೊಂಡ ಹಿರಿಮೆ ಲಿಂ.ಗೌರಮ್ಮ ತಾಯಿಯವರದ್ದು ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹೊನ್ನಕಿರಣಿಗಿ ರಾಚೋಟೇಶ್ವರ ಮಠದ ಚಂದ್ರಗುಂಡ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಾತೆಯಾಗಿ ಅವರನ್ನು ಅತ್ಯಂತ ಕಾಳಜಿಯಿಂದ ಪೋಷಣೆ ಮಾಡಿದ್ದಲ್ಲದೆ ಅವರಲ್ಲಿ ಅತ್ಯುತ್ತಮ ಸಂಸ್ಕಾರವನ್ನು ಬಿತ್ತಿ ಮಹಾತ್ಮರನ್ನಾಗಿ ರೂಪಿಸಿದ ಮಹಾಮಾತೆ ಗೌರಮ್ಮ ತಾಯಿಯವರು ತ್ಯಾಗಮೂರ್ತಿಯಾಗಿ ಬಾಳಿ ಬೆಳಗಿದವರು ಎಂದರು.

ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೇದಿಕೆಯ ಮೇಲೆ ಕರಡಕಲ್ಲ ಕೋರಿಸಿದ್ಧೇಶ್ವರ ಶಾಖಾಮಠದ ಶಾಂತರುದ್ರಮುನಿ ಮಹಾಸ್ವಾಮಿಗಳು, ಮುದನೂರಿನ ಸಿದ್ಧ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ತಾಂಡೂರಿನ ರಾಖೇಶ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಪ್ರಾಧ್ಯಾಪಕಿ ಜಗದೇವಿ ಕಲಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ನಾಲವಾರ ಮಠದ ಶಿವಾನುಭವ ಸಂಚಾಲಕ ಡಾ.ಸಿದ್ಧರಾಜರೆಡ್ಡಿ ಯಾದಗಿರಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಶರಣಕುಮಾರ ಜಾಲಹಳ್ಳಿ ಪ್ರಾರ್ಥಿಸಿದರೆ ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.

ವೇದಿಕೆಯ ಮೇಲೆ ಮಹೇಶ ಸ್ವಾಮಿ ಚಿಂಚೋಳಿ, ಸಂಗಾರೆಡ್ಡಿ ಗೌಡ ಮಲ್ಹಾರ, ಶಿವಲೀಲಾ ಯೋಗಾನಂದ ಮಳಿಮಠ, ನಿರ್ಮಲಾದೇವಿ ಮಹೇಶ ಸ್ವಾಮಿ, ನಾಗಮ್ಮಗೌಡ್ತಿ, ಮಲ್ಲಣ್ಣಗೌಡ ಪೋಲಿಸ್ ಪಾಟೀಲ, ಆನಂದ ಮದ್ರಿ ಬೆಂಗಳೂರು, ಮಂಜುನಾಥ ರಾವೂರ, ಮಹಾದೇವ ಗಂವ್ಹಾರ, ವಿರುಪಾಕ್ಷಯ್ಯ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!