ಆರಂಭವಾಗದ ನಾಲವಾರ ಸಂಪರ್ಕ ರಸ್ತೆ ಆಕ್ರೋಶ | ಗುಂಡಿಯಲ್ಲಿ ಸಸಿ ನೆಟ್ಟು ಪ್ರತಿಭಟಿಸಿದ ಗ್ರಾಮಸ್ಥರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ನಾಲವಾರ ಸ್ಟೇಷನ್-ನಾಲವಾರ ನಡುವಿನ ರಸ್ತೆ ಮೇಲಿನ ಗುಂಡಿಗಳಲ್ಲಿ ನಾಲವಾರ ಗ್ರಾಮಸ್ಥರು ಸಸಿ ನೆಟ್ಟು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆಯಿತು.
ಕಳೆದ ಹಲವು ವರ್ಷಗಳಿಂದ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದು ನಡೆದಾಡಲು ತೀವ್ರ ಸಂಕಷ್ಟ ಪಡುವಂತಾಗಿದೆ. ಜನರ ಜೀವ ತೆಗೆಯುತ್ತಿರುವ ಈ ರಸ್ತೆಗೆ ಅನುದಾನ ಬಿಡುಗಡೆಯಾಗಿದೆ ಎಂದು ಹೇಳುತ್ತಲೇ ಕಾಲಹರಣ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಭೀಮರೆಡ್ಡಿಗೌಡ ಕುರಾಳ ಮತ್ತು ಶಿವಕುಮಾರ ಸುಣಗಾರ ಅವರು ಮಾತನಾಡಿ, ನಾಲವಾರ ಮಾರ್ಗವಾಗಿ ಐತಿಹಾಸಿಕ ಸನ್ನತಿ, ಕನಗನಹಳ್ಳಿ, ಶಹಾಪುರ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಸಾವಿರಾರು ಸಂಖ್ಯೆಯ ಪ್ರವಾಸಿಗರು, ವಿದ್ಯಾರ್ಥಿಗಳು, ರೋಗಿಗಳು ಈ ರಸ್ತೆ ಮೇಲೆ ಸಂಚರಿಸಲು ಸಂಕಷ್ಟ ಪಡುವಂತಾಗಿದೆ. 3-4 ವರ್ಷಗಳಿಂದ ತಗ್ಗುಗುಂಡಿಗಳ ಮೇಲೆ ಓಡಾಡಿ ವಾಹನಗಳು ಜಖಂಗೊಂಡಿದ್ದರೆ ಹಲವರು ಕೈಕಾಲು ಮುರಿದುಕೊಂಡಿದ್ದಾರೆ. ಇಡೀ ಗ್ರಾಮದ ಮಾನ ರಸ್ತೆಯಲ್ಲಿ ಹರಾಜಾಗುತ್ತಿದೆ ಎಂದು ಹೇಳಿದರು.
ಪ್ರಭಾವಿ ಸಚಿವ ಎಂದು ಗುರುತಿಸಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರದಲ್ಲೇ ನೂರೆಂಟು ಸಮಸ್ಯೆಗಳು ತಾಂಡವಾಡುತ್ತಿವೆ. ಅಧಿಕಾರಿಗಳು ಮನಸೋ ಇಚ್ಛೆ ಆಡಳಿತ ನಡೆಸುತ್ತಿದ್ದು ಜನರ ಗೋಳು ಮುಗಿಲು ಮುಟ್ಟಿದೆ. ಕ್ಷೇತ್ರದಲ್ಲಿ ಆರಾಜಕತೆ ಉಂಟಾಗಿದ್ದು ಸಚಿವ ಪ್ರಿಯಾಂಕ್ ಖರ್ಗೆ ಆಡಳಿತ ಹಳಿ ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಅನುದಾನ ಬಿಡುಗಡೆಯಾಗಿದೆ ಎಂದು ಹೇಳುತ್ತಾ ಕಾಲಹರಣ ಮಾಡುತ್ತಿದ್ದು ಒಂದು ವಾರದಲ್ಲಿ ರಸ್ತೆ ನಿರ್ಮಾಣ ಕೆಲಸ ಆರಂಭಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ 150 ನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಲಿಂಗಾರೆಡ್ಡಿ ಗೌಡ ಬಾಸರೆಡ್ಡಿ, ಸಿದ್ದುಗೌಡ ಕುರಾಳ, ಶರಣಗೌಡ ಬೆನಕನಹಳ್ಳಿ, ಅನಿಲಕುಮಾರ ಕರದಳ್ಳಿ, ಅಭಿನವ ಸ್ವಾಮಿ, ಮರಿಯಪ್ಪ ಬಳಬಾ, ಕೊರೇಶಗೌಡ ಬಿರಾಳ, ಮಲ್ಲಯ್ಯ ಸ್ವಾಮಿ ದೇವಕಾರ, ಮಲ್ಲಿಕಾರ್ಜುನ ಲಾಡ್ಲಾಪುರ, ದೇವು ಪೂಜಾರಿ, ಮೈಲಾರಿ ಮಳಬಾ ಸಹಿತ ಆಟೋ ಚಾಲಕರು ಹಾಗೂ ಇನ್ನಿತರರು ಇದ್ದರು. ನಾಲವಾರ ನಾಡಕಚೇರಿ ಉಪ ತಹಶೀಲ್ದಾರ ಮುತ್ತಪ್ಪ ಕತ್ನಳ್ಳಿ ಮನವಿ ಪತ್ರ ಸ್ವೀಕರಿಸಿದರು.
