ಸುಗೂರ ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ಅಕ್ಟೋಬರ್ 1ರಂದು ಕೂರಿಗಿ ಪೂಜೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿರುವ ಪವಾಡ ಪುರುಷ ಸಚ್ಚಿದಾನಂದ ನಿತ್ಯ ನಿರಂಜನ ಮೂರ್ತಿ ಸ್ವಯಂ ಸಿದ್ಧ ಶರಣ ಸದ್ಗುರು ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ರೈತರ ಹಿತಕ್ಕಾಗಿ ಆಚರಿಸಲಾಗುವ ವಿಶಿಷ್ಟ ಕೂರಿಗಿ ಪೂಜೆ (ಕೊರಗಿ ಪೂಜೆ/ಬಿತ್ತನೆ ಪೂಜೆ) ಕಾರ್ಯಕ್ರಮವು ಅಕ್ಟೋಬರ್ 1ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಪೂಜಾ ಕಾರ್ಯಕ್ರಮವನ್ನು ಮಠದ ಪೀಠಾಧಿಪತಿ ಶ್ರೀ ಹಿರಗಪ್ಪ ತಾತನವರ ದಿವ್ಯ ಅಮೃತ ಹಸ್ತದಿಂದ ನೆರವೇರಲಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ವಿಶೇಷ ಮಹತ್ವ ಹೊಂದಿರುವ ಈ ಸಂಪ್ರದಾಯವನ್ನು ಪ್ರತಿ ವರ್ಷ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಉತ್ತಮ ಮಳೆ-ಬೆಳೆ ಆಗಲಿ, ರೈತರು ಸಮೃದ್ಧಿಯಿಂದ ಬದುಕಲಿ ಹಾಗೂ ದೇಶಕ್ಕೆ ಅನ್ನ ನೀಡುವ ಅನ್ನದಾತರಿಗೆ ಒಳಿತಾಗಲಿ ಎಂಬ ಆಶಯದಿಂದ ಕೂರಿಗಿ ಪೂಜೆ ನೆರವೇರಿಸಲಾಗುತ್ತದೆ.
ಉತ್ತರ ಕರ್ನಾಟಕದ ಕೃಷಿ ಸಂಪ್ರದಾಯದಂತೆ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಮುನ್ನ ರೈತರು ತಮ್ಮ ಜೀವನಾಧಾರವಾದ ಕೂರಿಗಿ (ಬಿತ್ತನೆ ಸಾಧನ) ಹಾಗೂ ಎತ್ತುಗಳಿಗೆ ಪೂಜೆ ಸಲ್ಲಿಸಿ, ಮಠದ ಪೀಠಾಧಿಪತಿಗಳ ಆಶೀರ್ವಾದ ಪಡೆದು ಹೊಲಕ್ಕೆ ತೆರಳಿ ಕೃಷಿ ಕಾರ್ಯ ಆರಂಭಿಸುವುದು ವಾಡಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಸುಗೂರ ಎನ್ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು, ಭಕ್ತರು ಮತ್ತು ಶ್ರೀ ಮಠದ ಸಕಲ ಸದ್ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ, ಕೂರಿಗಿ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಭೋಜಲಿಂಗೇಶ್ವರ ಅಜ್ಜನ ಕೃಪೆಗೆ ಪಾತ್ರರಾಗಬೇಕೆಂದು ಭಕ್ತರು ಮನವಿ ಮಾಡಿದ್ದಾರೆ.
ಈ ಕುರಿತು ಊರಿನ ಪ್ರಮುಖರಾದ ಶರಣಗೌಡ ಬೆನಕನಹಳ್ಳಿ, ಭೀಮರೆಡ್ಡಿಗೌಡ ಕುರಾಳ, ವಿಶ್ವನಾಥ ರೆಡ್ಡಿ ಪಾಟೀಲ, ಈರಣ್ಣ ಬಲಕಲ್ ಯಾದಗಿರಿ, ಶರಣಗೌಡ ವಕೀಲರು ಸುಗೂರ ಎನ್. ಸಿದ್ರಾಮರೆಡ್ಡಿಗೌಡ ಬೆನಕನಹಳ್ಳಿ, ಶಂಕರಗೌಡ ಮಾಸ್ತರ ಯಾದಗಿರಿ, ಬಸವರಾಜ ಹಡಪದ ಸುಗೂರ ಎನ್, ಪ್ರಭು ಹೂಗಾರ ಯಾದಗಿರಿ, ಸಿದ್ದುಗೌಡ ಕುರಾಳ, ಭಾಬು ಪಾಟೀಲ, ರಾಜೇಂದ್ರ ನಾಯ್ಕೋಡಿ, ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್ ಅವರು ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
