ಹಿಂಗುಲಾಂಬಿಕಾ ಶಿಕ್ಷಣ ಮಹಾವಿದ್ಯಾಲಯದ ಎನ್.ಎಸ್. ಎಸ್. ವಾರ್ಷಿಕ ಶಿಬಿರಕ್ಕೆ ಚಾಲನೆ | ಸುಸ್ಥಿರ ಭಾರತ ನಿರ್ಮಾಣಕ್ಕೆ ಸತ್ಯಂಪೇಟೆ ಕರೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಯುವಕರು ಕಂಪ್ಯೂಟರ್, ಸ್ಮಾರ್ಟ್ ಫೋನ್, ಇಂಟರ್ ನೆಟ್ ಮುಂತಾದ ಡಿಜಿಟಲ್ ಮಾಧ್ಯಮಗಳನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಂಡು ಭಾರತವನ್ನು ಸುಸ್ಥಿರಗೊಳಿಸಲು ಮಹತ್ವದ ಪಾತ್ರ ವಹಿಸಬೇಕು ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ನಗರದ ಶ್ರೀ ಹಿಂಗುಲಾಂಬಿಕಾ ಶಿಕ್ಷಣ ಸಂಸ್ಥೆಯ ಶ್ರೀ ಹಿಂಗುಲಾಂಬಿಕಾ ಶಿಕ್ಷಣ ಮಹಾವಿದ್ಯಾಲಯ ಹಾಗೂ ಗುಲ್ಬರ್ಗ ವಿವಿ ಸಂಯುಕ್ತಾಶ್ರಯದಲ್ಲಿ ಕುಸನೂರಿನ ಮೌನೇಶ್ವರ ದೇವಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರು ಆದರ್ಶ ಪುರುಷರ ಜೀವನಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸದೃಢ ಭಾರತ ನಿರ್ಮಾಣ ಮಾಡಬೇಕು. ಎನ್.ಎಸ್.ಎಸ್. ನಿಂದ ಶಿಸ್ತು, ಸ್ವಚ್ಛತೆ, ಭ್ರಾತೃತ್ವ ಮೂಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗೀತಾ ಪಿ. ಮೋರೆ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಿಂದ ಸಾಮಾಜಿಕ ಜೀವನ, ನಾಯಕತ್ವ ಗುಣ, ಸಹಕಾರ ಗುಣ ಬೆಳೆಯುತ್ತದೆ. ಯುವಕರು ವೈಚಾರಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎಸ್.ಎಚ್.ಇ.ಎಸ್. ಬಿ.ಇಡಿ. ಕಾಲೇಜು ಮೇಲ್ವಿಚಾರಕಿ ಅರುಣಾ ಗಡಾಳೆ, ಎನ್. ಎಸ್.ಎಸ್. ಕಾರ್ಯಕ್ರಮಾಧಿಕಾರಿ ವಸಂತಕುಮಾರ ಸಿ. ರಾಠೋಡ್, ಅಂಬಿಕಾ ಇತರರು ಉಪಸ್ಥಿತರಿದ್ದರು.
ಮೌನೇಶ್ವರ ದೇವಸ್ಥಾನದ ಮುಖ್ಯಸ್ಥ ಶಿವರಾಜ ಶಾಸ್ತ್ರಿ ಸಾನ್ನಿಧ್ಯ ವಹಿಸಿದ್ದರು. ಲಕ್ಷ್ಮೀ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಬಸನಗೌಡ ಪೊಲೀಸ್ ಪಾಟೀಲ ಸ್ವಾಗತಿಸಿದರು. ಪ್ರೊ. ರಮೇಶ ಯಾಳಗಿ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ನಿರೂಪಿಸಿದರು. ಐಶ್ವರ್ಯ ವಂದಿಸಿದರು.
“ರಾಷ್ಟ್ರವನ್ನು ಮುನ್ನಡೆಸಲು ಒಳ್ಳೆಯ ವಿಚಾರಗಳಿರಬೇಕು. ಪ್ರತಿಯೊಬ್ಬರಿಗೂ ಶಿಕ್ಷಣ ಬಹಳ ಅಗತ್ಯ. ಶಿಕ್ಷಣದ ಜೊತೆಗೆ ಸಂಸ್ಕಾರ ಅಗತ್ಯ. ವಿದ್ಯೆಯ ಜೊತೆಗೆ ವಿನಯ ಇರಬೇಕು.”- ಶಿವರಾಜ ಶಾಸ್ತ್ರಿ, ಕಲಬುರಗಿ.

