ಸುಪ್ರೀಂ ಆದೇಶ ಜಾರಿ ಮಾಡದೇ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮಾದಿಗ ಸಮುದಾಯಕ್ಕೆ ದ್ರೋಹ: ದೇವೀಂದ್ರನಾಥ್ ನಾದ್ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಒಳ ಮೀಸಲಾತಿಯನ್ನು ಜಾರಿ ಮಾಡುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದ್ದರೂ ರಾಜ್ಯ ಸರ್ಕಾರ ಜಾರಿ ಮಾಡದೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ದ್ರೋಹ ಮಾಡುತ್ತಿದೆ ಎಂದು ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ, ಮಾದಿಗ ಸಮಾಜದ ಜಿಲ್ಲಾ ಮುಖಂಡ ದೇವಿಂದ್ರನಾಥ್ ನಾದ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರಿಂ ಕೋರ್ಟ್ ಆದೇಶ ಮಾಡಿದ್ದರೂ ಸಹ ಈದೀಗ ಮತ್ತೆ ಸಮಿತಿ ರಚನೆ ಮಾತನಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕ ವಿಳಂಬ ದೋರಣೆ ಅನುಸರಿಸುತ್ತಾ ಮಾದಿಗ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಈಗಾಗಲೇ ಹರಿಯಾಣ ಸರ್ಕಾರ ಸುಪ್ರಿಂ ಆದೇಶವನ್ನು ಪಾಲನೆ ಮಾಡಿ ಜಾರಿ ಮಾಡಿದೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಒಳಮೀಸಲು ಜಾರಿ ಮಾಡುವ ಭರವಸೆ ನೀಡಿಯೇ ಅಧಿಕಾರಕ್ಕೆ ಬಂದು 15 ತಿಂಗಳಾಗುತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಸುಪ್ರೀಂ ಆದೇಶವಾದರೂ ಸಹ, ಅದನ್ನು ಪಾಲನೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ಕ್ರಮ ಕೈಗೊಂಡು 15 ದಿನಗಳಲ್ಲಿ ಒಳ ಮೀಸಲಾತಿ ಜಾರಿಗೆ ಮುಂದಾಗಬೇಕು ಇಲ್ಲವಾದಲ್ಲಿ 30 ವರ್ಷಗಳಿಂದ ನಮ್ಮ ಸಮುದಾಯ ಕಂಡು ಅನುಭವಿಸಿದ ನೋವುಗಳು ತಾಳ್ಮೆಯ ಕಟ್ಟೆಯೊಡೆಯಲಿವೆ, ರಕ್ತಪಾತಕ್ಕೆ ದಾರಿ ಮಾಡಿಕೊಟ್ಟರೆ ಅದಕ್ಕೆ ನೀವೇ ಹೊಣೆಯಾಗುತ್ತೀರಿ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಹಣಮಂತ ಇಟ್ಟಗಿ, ಸ್ವಾಮಿದೇವ್ ದಾಸನ್‌ಕೇರಿ, ಗೋಪಾಲ್ ದಾಸನ್‌ಕೇರಿ, ಲಿಂಗಪ್ಪ ವಡ್ನಳ್ಳಿ, ಬಸವರಾಜ್ ಮೈತ್ರಿ, ಆಂಜನೇಯ ಬಬಲಾದಿ, ಚಂದ್ರಶೇಖರ್ ಕಡೇಸೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.