ಪತಂಜಲಿ ರಾಜ್ಯ ಪ್ರಭಾರಿ ಡಾ. ಭವರಲಾಲ್ ಆರ್ಯ ಅವರಿಗೆ ಅಭಿನಂದನೆ
ನಾಗಾವಿ ಎಕ್ಸಪ್ರೆಸ್
ವಾಡಿ: ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಯೋಗ ಸಾಧಕ ಡಾ. ಭವರಲಾಲ್ ಆರ್ಯ ಅವರನ್ನು ವಾಡಿ ಪಟ್ಟಣದ ಪತಂಜಲಿ ಯೋಗ ಸಮಿತಿಯ ಪ್ರಭಾರಿ ವೀರಣ್ಣ ಯಾರಿ ಅವರು ಆತ್ಮೀಯವಾಗಿ ಅಭಿನಂದಿಸಿ ಗೌರವಿಸಿದರು.
ಕಲಬುರಗಿ ನಗರದ ತ್ರಿನೇತ್ರ ಬ್ಯಾಂಕ್ವೆಟ್ ಹಾಲ್ನಲ್ಲಿ ಪತಂಜಲಿ ಯೋಗ ಸಮಿತಿಯಿಂದ ಆಯೋಜಿಸಲಾಗಿದ್ದ ಒಂದು ತಿಂಗಳ ಯೋಗ ಶಿಕ್ಷಕರ ಶಿಬಿರದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಡಾ. ಭವರಲಾಲ್ ಆರ್ಯ ಅವರಿಗೆ, ಸುಮಾರು ಹದಿನೈದು ವರ್ಷಗಳ ಹಿಂದೆ ಅವರು ಪತಂಜಲಿ ಸಂಸ್ಥೆಯ ಕಾರ್ಯನಿಮಿತ್ತ ಕಲಬುರಗಿಗೆ ಆಗಮಿಸಿದ್ದಾಗ ತೆಗೆದಿದ್ದ ಅಪರೂಪದ ಛಾಯಾಚಿತ್ರವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೀರಣ್ಣ ಯಾರಿ ಅವರು ಆರ್ಯಜಿ ಯೊಂದಿಗೆ ಮಾತನಾಡುತ್ತಾ ಸುಮಾರು 15 ವರ್ಷಗಳ ಹಿಂದೆ ನೀವು ಪತಂಜಲಿ ಸಂಸ್ಥೆಯ ಬೆಳವಣಿಗೆಗಾಗಿ ಪಟ್ಟ ನಿಸ್ವಾರ್ಥ ಶ್ರಮದ ಫಲವಾಗಿ, ಇಂದು ಲಕ್ಷಾಂತರ ಜನರು ಯೋಗಪಟುಗಳಾಗಿ ಸಮಾಜಕ್ಕೆ ಆರೋಗ್ಯ ಮತ್ತು ಜಾಗೃತಿ ಪಸರಿಸುತ್ತಿದ್ದಾರೆ. ನಿಮ್ಮ ಈ ಸೇವೆ ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಮಿತಿಯ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಶಿವಾನಂದ ಸಾಲಿಮಠ, ಜಿಲ್ಲಾ ಪ್ರಭಾರಿ ಸುಭಾಷಚಂದ್ರ ಹೊಟ್ಟೆ, ಕೋಮರಾಮ ಭೀಮ ಗೊಂಡ ಕುರುಬ ಸಮಾಜದ ಜಿಲ್ಲಾ ಅಧ್ಯಕ್ಷ ಬಸವರಾಜ ಮದ್ರಕಿ ಹಾಗೂ ಮುಖಂಡ ಮಲ್ಲಿಕಾರ್ಜುನ ಅವಂಟಿ ದಿಗ್ಗಾಂವ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
