ಪ್ರಸಾದ್ ಅವಂಟಿ ಜನ್ಮದಿನದ ನಿಮಿತ್ತ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಗೌರವ ಸತ್ಕಾರ ಹಾಗೂ ಪ್ರೋತ್ಸಾಹಧನ ವಿತರಣೆ
ವಿದ್ಯಾರ್ಥಿಗಳಿಗೆ ಸತ್ಕಾರ ಮಾಡುವ ಕಾರ್ಯ ಶ್ಲಾಘನೀಯ: ಹಿರೇಮಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿದ್ಯಾರ್ಥಿ ಜೀವನದಲ್ಲಿ ಪಿಯು ಶಿಕ್ಷಣ ಮಹತ್ವದ ಘಟ್ಟ ವಾಗಿದ್ದು, ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕಾರ ಮಾಡುವ ಕಾರ್ಯ ಶ್ಲಾಘನೀಯ ಎಂದು ತಹಸೀಲ್ದಾರ್ ನಾಗಯ್ಯ ಹೀರೆಮಠ ಹೇಳಿದರು.
ಪಟ್ಟಣದ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪ್ರಸಾದ ಅವಂಟಿ ಗೆಳೆಯರ ಬಳಗದ ವತಿಯಿಂದ ಯುವ ನ್ಯಾಯವಾದಿ ಪ್ರಸಾದ ಸಿ. ಅವಂಟಿ ಅವರ 29 ನೇ ಜನ್ಮದಿನೋತ್ಸವ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಪಿಯುಸಿ ಪರಿಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಗೌರವ ಸತ್ಕಾರ ಹಾಗೂ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸನ್ಮಾನ ಮತ್ತು ಪುರಸ್ಕಾರ ಎಂಬುದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮತ್ತು ಪ್ರೋತ್ಸಾಹ ನೀಡಿದಂತಾಗುತ್ತದೆ ಇದು ಇತರ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲಿದೆ ಎಂದರು.
ಈಗ ಸ್ಪರ್ಧಾತ್ಮಕ ಯುಗ ಇರುವುದರಿಂದ ವಿದ್ಯಾರ್ಥಿಗಳಿಗೆ ಇಂತಹ ಸತ್ಕಾರ ಮತ್ತಷ್ಟು ಸ್ಪೂರ್ತಿಯಾಗಲಿದೆ ಎಂದು ಹೇಳಿದರು. ಶಿಕ್ಷಣ ಒಂದಿದ್ದರೆ ಏನಾದರೂ ಸಾಧನೆ ಮಾಡಬಹುದು, ಫೇಸ್ ಬುಕ್ ನೋಡುವುದನ್ನು ಬಿಟ್ಟು ಟೆಕ್ಸ್ಟ್ ಬುಕ್ ನೋಡುವುದನ್ನು ಕಲಿಯಬೇಕು ಇದರಿಂದ ಜ್ಞಾನದ ವೃದ್ದಿಯಾಗಲಿದೆ ಈ ನಿಟ್ಟಿನಲ್ಲಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಾಗ ತಂದೆತಾಯಿಯರ ಹೆಸರು ಬರಲಿದೆ ಎಂದು ಮಾರ್ಮಿಕವಾಗಿ ನುಡಿದರು.
ಸಾನಿಧ್ಯ ವಹಿಸಿದ್ದ ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಪ್ರಸಾದ್ ಅವಂಟಿ ತಮ್ಮ 29 ನೇ ಚಿಕ್ಕ ವಯಸ್ಸಿನಲ್ಲೇ ಸಮಾಜಮುಖಿ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ, ತಮ್ಮ ಜನ್ಮ ದಿನದ ನಿಮಿತ್ತ ವಿದ್ಯಾರ್ಥಿಗಳಿಗೆ ಗೌರವ ಸತ್ಕಾರ ಮಾಡುತ್ತೀರುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾವೂರ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬಸವೇಶ್ವರ ಶಿಕ್ಷಣ ಸಂಸ್ಥೆಯ ಮುಖ್ಯಶಿಕ್ಷಕಿ ಕಸ್ತೂರಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯ ಅಧಿಕಾರಿ ಮಲ್ಲಿಕಾರ್ಜುನ ಸೇಡಂ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಹಿರಿಯ ನ್ಯಾಯವಾದಿ ಚಂದ್ರಶೇಖರ ಅವಂಟಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಉಭಯ ಶ್ರೀಗಳು ಪ್ರಸಾದ್ ಅವಂಟಿ ಅವರಿಗೆ ಜನ್ಮ ದಿನದ ಶುಭಾಶಯಗಳು ಕೋರಿ ಸನ್ಮಾನಿಸಿದರು.
ಪ್ರಮುಖರಾದ ವಿಠಲ್ ನಾಯಕ, ವೀರಣ್ಣ ಯಾರಿ, ಆನಂದ ಪಾಟೀಲ ನರಿಬೋಳ ನಾಗರಾಜ ರೇಷ್ಮಿ, ವೀರಣ್ಣ ಸುಲ್ತಾನಪೂರ, ನಾಗರಾಜ ಕುಲಕರ್ಣಿ, ಬಸವರಾಜ ಬೊಮ್ಮನಳ್ಳಿ, ನಿಂಬಣ್ಣಗೌಡ ಮಾಲಿ ಪಾಟೀಲ, ಶೈಲಜಾ ಹಲಸೂರು, ನಾಗುಬಾಯಿ ಜಿತುರೆ, ಮಹೇಶ್ ಬಾಳಿ, ಅಕ್ಕಮಹಾದೇವಿ, ಈಶ್ವರ ಅಳ್ಳೋಳ್ಳಿ, ಮನೋಹರ ಹಡಪದ, ಶಂಕರ ರಾಠೋಡ ವೀರಭದ್ರಪ್ಪ ಹುಮನಾಬಾದ್, ಅಕ್ಷಯ ಚಕ್ಕಡಿ ಸೇರಿದಂತೆ ಅನೇಕರು ಇದ್ದರು. ಜಗದೇವ ದಿಗ್ಗಾಂವಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಸೌಮ್ಯ, ಐಶ್ವರ್ಯ ಅವರು ಪ್ರಾರ್ಥಿಸಿದರು, ಚಂದ್ರಶೇಖರ ನಾಲವಾರ ಸ್ವಾಗತಿಸಿದರು, ಶಿಕ್ಷಕ ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.