ರಾವೂರ ಶಾಲಾ ಸಂಸತ್ ಚುನಾವಣೆ, ಶೇ. 96 ರಷ್ಟು ಮತದಾನ | ಗೆದ್ದು ಬೀಗಿದ ವಿದ್ಯಾರ್ಥಿ ನಾಯಕರು
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಚುನಾವಣೆ ಹಾಗೂ ಮತದಾನದ ಅರಿವು ಮೂಡಿಸಲು ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ಸಂಸತ್ ಚುನಾವಣೆಯಲ್ಲಿ ಮಕ್ಕಳು ಗೆದ್ದು ಗೆಲುವಿನ ನಗೆ ಬೀರಿದರು.
ಹೌದು ತಾಲೂಕಿನ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ನಡೆದ ಮಕ್ಕಳ ಅಣಕು ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಮತಯಂತ್ರದಲ್ಲಿ ಚಲಾಯಿಸಿ ತಮ್ಮ ತರಗತಿ ನಾಯಕರನ್ನು ತಾವೇ ಆಯ್ಕೆ ಮಾಡಿಕೊಂಡರು. ಒಟ್ಟು ಹತ್ತು ಮತ ಕೇಂದ್ರಗಳಲ್ಲಿ ನಡೆದ ಚುನಾವಣೆಯಲ್ಲಿ 520 ಮತದಾರರ ಪೈಕಿ 500 ಮಕ್ಕಳು ತಮ್ಮ ಮತ ಚಲಾಯಿಸಿದರು. ಶೆ 96 ರಷ್ಟು ಮತದಾನವಾಯಿತು.
ಬಹಳ ಶಿಸ್ತು ಬದ್ಧವಾಗಿ ಸಾರ್ವತ್ರಿಕ ಚುನಾವಣೆಗಳಲ್ಲಿ ನಡೆಯುವಂತೆ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಪ್ರಚಾರ, ಮತಎಣಿಕೆ ವರೆಗೆ ಚುನಾವಣಾ ಅಧಿಕಾರಿಯಾಗಿ ಸಮಾಜ ವಿಜ್ಞಾನ ಶಿಕ್ಷಕ ಸಿದ್ದಲಿಂಗ ಬಾಳಿ ಎಲ್ಲಾ ಚುನಾವಣೆ ಪ್ರಕ್ರಿಯೆಗಳನ್ನು ಪಾಲಿಸಿ ಮಕ್ಕಳಿಗೆ ಅರಿವು ಮೂಡಿಸಿದರು. 20 ಸ್ಥಾಗಳಿಗೆ ನಡೆದ ಚುನಾವಣೆಯಲ್ಲಿ 47 ಅಭ್ಯರ್ಥಿಗಳು ಸ್ಪರ್ದಿಸಿದ್ದರು. ತರಗತಿವಾರು ಮಕ್ಕಳು ಗುರುತಿನ ಚೀಟಿಯೊಂದಿಗೆ ಸಾಲಾಗಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಶಾಲೆಯ ಏನ್.ಸಿ. ಸಿ ತಂಡ ಚುನಾವಣೆ ಪ್ರಕ್ರಿಯೆ ಶಾಂತಿಯುತ ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂತಿಮವಾಗಿ ಮತ ಎಣಿಕೆಯಲ್ಲಿ ಗೆದ್ದ ಮಕ್ಕಳು ವಿಜಯೋತ್ಸವ ಆಚರಿಸಿದರು.
ಸಂಸ್ಥೆಯ ಅಧ್ಯಕ್ಷ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಪ್ರತಿಯೊಂದು ಮತ ಕೇಂದ್ರಕ್ಕೆ ತೆರಳಿ ಚುನಾವಣಾ ಪ್ರಕ್ರಿಯೆಗಳನ್ನು ವೀಕ್ಷಿಸಿ ಮಕ್ಕಳಿಗೆ ಹುರಿದುಂಬಿಸಿದರು ಹಾಗೇ ಚುನಾವಣೆ ಮಹತ್ವ ಕುರಿತು ಹೇಳಿದರು.
ಪ್ರಾಚಾರ್ಯ ಕೆ. ಐ. ಬಡಿಗೇರ್ ಪ್ರಸ್ತುತ ಚುನಾವಣೆಗಳಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಸರ್ವ ಸಿಬ್ಬಂದಿ ಬಳಗ ಮತಗಟ್ಟೆಯ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಮುಖ್ಯಗುರು ವಿದ್ಯಾಧರ ಖಂಡಾಳ ಚುನಾವಣೆಯ ಮೇಲುಸ್ತುವಾರಿ ವಹಿಸಿದ್ದರು.
“ಮಕ್ಕಳಿಗೆ ಚುನಾವಣೆಗಳು ಯಾವ ರೀತಿ ನಡೆಯುತ್ತವೆ ಎನ್ನುವುದನ್ನು ಶಾಲಾ ಹಂತದಲ್ಲೇ ತಿಳಿಸುವ ಪ್ರಯತ್ನ ಇದಾಗಿದೆ. ಚುನಾವಣೆಯ ಎಲ್ಲಾ ಪ್ರಕ್ರಿಯೆಗಳಲ್ಲಿ ಶಿಕ್ಷಕರ ಸಹಕಾರ ಮತ್ತು ಮಕ್ಕಳ ಸಹಭಾಗಿತ್ವ ಮೆಚ್ಚುವಂತದ್ದು. ಪೂಜ್ಯರ ಮತ್ತು ಆಡಳಿತ ಮಂಡಳಿ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ”.-ಸಿದ್ದಲಿಂಗ ಬಾಳಿ (ಶಿಕ್ಷಕರು)
“ನಮಗೆ ಮೊದಲ ಬಾರಿ ಮತ ಚಲಾಯಿಸಿದ್ದು ಖುಷಿಯಾಗಿದೆ. ಹೆಚ್ಚಿನ ಮತ ಪಡೆದು ನನ್ನ ಸಹಪಾಠಿಗಳು ಆಯ್ಕೆ ಮಾಡಿದ್ದಾರೆ. ನನ್ನ ಕರ್ತವ್ಯವನ್ನು ಪ್ರಮಾಣಿಕತೆಯಿಂದ ನಿರ್ವಹಿಸಿತ್ತೇನೆ. ಮತ್ತು ಈ ಚುನಾವಣೆಗಳಿಂದ ನಾವು ಬಹಳಷ್ಟು ಕಲಿತಿದ್ದೇವೆ”.-ಭಾಗ್ಯಶ್ರೀ ಈಶ್ವರಾಜ (ಗೆದ್ದ ವಿದ್ಯಾರ್ಥಿನಿ)
