ರಿಕ್ರಿಯೇಷನ್ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಹಳೆ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ | ಅನ್ನ, ನೀರು ಮತ್ತು ಗಾಳಿಯಷ್ಟೇ ಮನುಷ್ಯನಿಗೆ ಶಿಕ್ಷಣವೂ ಅತ್ಯಗತ್ಯ: ಕಂಬಳೇಶ್ವರ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಕ್ಕಳಿಗೆ ಕೇವಲ ಜನ್ಮ ನೀಡುವುದು ಮುಖ್ಯವಲ್ಲ, ಅವರಿಗೆ ಎಂತಹ ಶಿಕ್ಷಣ ಮತ್ತು ಸಂಸ್ಕಾರ ನೀಡುತ್ತೇವೆ ಎಂಬುದು ಮುಖ್ಯ. ಅನ್ನ, ನೀರು ಮತ್ತು ಗಾಳಿಯಷ್ಟೇ ಮನುಷ್ಯನಿಗೆ ಶಿಕ್ಷಣವೂ ಅತ್ಯಗತ್ಯ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ರಿಕ್ರಿಯೇಷನ್ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸರ್ಕಾರಿ ಸೇವೆಯಲ್ಲಿರುವ ಹಳೆ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಲ, ಮನೆ, ಆಸ್ತಿ ಅಂತಸ್ತು, ಚಿನ್ನ ಮಾಡುವ ಬದಲು ಹೆಚ್ಚಿನ ಶಿಕ್ಷಣ ಕಲಿಸುವ ಮೂಲಕ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು. ಮಕ್ಕಳಿಗೆ ಉನ್ನತ ಸ್ಥಾನ, ಸಾಧನೆಗೈಯುವ ಮೂಲಕ ಮಕ್ಕಳು ರಾಷ್ಟ್ರೀಯ ಸಂಪತ್ತು ಆಗಬೇಕೆಂದು ಹೇಳಿದರು.
ಮಳಖೇಡ ದರ್ಗಾದ ಹಜರತ್ ಸೈಯದ್ ಶಾ ಖಲೀಫತ್ ರಹಮಾನ್ ಖಾದ್ರಿ ಮಾತನಾಡಿ, ಇಂದು ಶಿಕ್ಷಣ ಜತೆಗೆ ಸಂಸ್ಕಾರ ಆವಶ್ಯಕತೆ ಇದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ವಸತಿ ಶಾಲೆಗೆ ಸೇರಿಸುವುದರಿಂದ ಪೋಷಕರು ಮತ್ತು ಮಕ್ಕಳ ನಡುವಿನ ಮಮಕಾರ ಕಡಿಮೆಯಾಗುವ ಆತಂಕವಿದೆ. ಇಂದು ಉನ್ನತ ಶಿಕ್ಷಣ ಪಡೆದವರು ಹೆತ್ತವರನ್ನು ಅನಾಥಾಶ್ರಮಕ್ಕೆ ಸೇರಿಸುತ್ತಿರುವುದು ವಿಷಾದನೀಯ. ರೈತರ ತಂದೆ, ತಾಯಿಯಂದಿರು ಯಾರು ಅನಾಥಾಶ್ರಮದಲ್ಲಿ ಇಲ್ಲ, ರೈತರ ಮಕ್ಕಳು ಮಾದರಿಯಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಕಾಶಿ ಮಾತನಾಡಿ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಶಾಲೆಯ ಪೀಠೋಪಕರಣ ಹಾಗೂ ಕಂಪ್ಯೂಟರ್ಗಳಿಗಾಗಿ 5 ಲಕ್ಷ ರೂಪಾಯಿ ಅನುದಾನ ನೀಡಲಿದ್ದಾರೆ. ಸಂಸ್ಥೆಯು ಶೀಘ್ರದಲ್ಲೇ ಸ್ವಂತ ಕಟ್ಟಡವನ್ನು ಹೊಂದಲಿದೆ ಎಂದು ಹೇಳಿದರು.
ಸಂಸ್ಥೆಯ ಸದಸ್ಯ ಆದಾಮ್ ಅಲಿ ಸಾಬ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಸರ್ಕಾರಿ ಸೇವೆಯಲ್ಲಿರುವ ಶಾಲೆಯ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಮಕ್ಕಳು ತಮ್ಮ ಶಾಲಾ ದಿನಗಳ ಅನಿಸಿಕೆಗಳನ್ನು ಹಂಚಿಕೊಂಡರು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ ಶಬ್ದಕೋಶ ಪುಸ್ತಕ, ಭಾರತ ದರ್ಶನ, ಪ್ರವಾಸ ಕೈಪಿಡಿಗಳು ಸತೀಶ ಹಡಪದ ನೀಡಿ ಗೌರವಿಸಿದರು.
ಸಂಸ್ಥೆಯ ಪದಾಧಿಕಾರಿಗಳಾದ ಸೈಯದ್ ನಜೀರೋದ್ದಿನ ಮುತವಲ್ಲಿ, ಚಿತಾಸಾಬ ಹೊನಗುಂಟಾ, ಭೀಮರಾವ್ ಹಡಪದ, ವೀರೇಂದ್ರಕುಮಾರ ಕೊಲ್ಲೂರ, ಹಣಮಂತ ಕಾಶಿ, ಅಬ್ದುಲ್ ಸಲೀಂ ಸಾಬ್, ಶೇಖ್ ಚಾಂದಪಾಶಾ, ನಾಗರಾಜ ಬೆಳಮಗಿ, ನಾಗಪ್ಪ ಜಮಾದಾರ, ಖಮರುನ್ನೀಸಾ ಪಟೇಲ್, ವಿಡಿ ಸೋಮಶೇಖರ, ಗುರುಸಿದ್ಧಯ್ಯ ಮಠಪತಿ, ಸಂಗೀತಾ ಬಾಳಿ, ಜಗನ್ನಾಥ ರಾಠೋಡ, ಶ್ವೇತಾ ರಾಠೋಡ, ಸಾವಿತ್ರಿ ದೇಶಪಾಂಡೆ, ಮನುಜಾ ಉತ್ತರಕರ, ಶಶಿರೇಖಾ, ರಾಜಶೇಖರ ಬಳ್ಳಾ, ಪಲ್ಲವಿ ಕುಲಕರ್ಣಿ, ಅಶ್ವಥರಾಮ ರಾಠೋಡ, ತಿರುಪತಿ ಚವ್ಹಾಣ ಸೇರಿದಂತೆ ಇತರರಿದ್ದರು.
ಸುನೀತ್ ರಾಠೋಡ ಸ್ವಾಗತಿಸಿದರು, ಕಾಶಿರಾಯ ಕಲಾಲ ನಿರೂಪಣೆ ಮಾಡಿದರು, ಮುಖ್ಯಗುರು ಮಸ್ತಾನ್ ಪಟೇಲ್ ಅನವಾರ ವಂದಿಸಿದರು.

