ವಿಶ್ವ ಪರಿಸರ ದಿನಾಚರಣೆ, ಪ್ರತಿಭಾ ಪುರಸ್ಕಾರ | ಮಕ್ಕಳು ಉತ್ತಮ ವಿದ್ಯಾಭ್ಯಾಸದ ಜೊತೆಗೆ ಪರಿಸರದ ಕಾಳಜಿ ಬೆಳೆಸಿಕೊಳ್ಳಿ: ಬಡಿಗೇರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಕ್ಕಳು ಉತ್ತಮ ವಿದ್ಯಾಭ್ಯಾಸದ ಜೊತೆಗೆ ಪರಿಸರದ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಅರಣ್ಯಾಧಿಕಾರಿ ವಿಜಯಕುಮಾರ ಬಡಿಗೇರ ಸಲಹೆ ನೀಡಿದರು.
ಪಟ್ಟಣದ ಆಚಾರ್ಯ ಚಾಣಕ್ಯ ಶಿಕ್ಷಣ ಸಂಸ್ಥೆ ಸಂಚಾಲಿತ ಗಾಯತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಗಾವಿ ಸೇವಾ ಪ್ರತಿಷ್ಠಾನದಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಕೆಲಸ ಸಂಘ-ಸಂಸ್ಥೆಗಳು ಮಾಡಬೇಕು. ಮಕ್ಕಳು ಉತ್ತಮ ವಿದ್ಯಾಭ್ಯಾಸದ ಜತೆಗೆ ಪರಿಸರದ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಗುರುಮಠಕಲ್ ಮಾತನಾಡಿ, ಪರಿಸರ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಸಿಗಳನ್ನು ನೆಟ್ಟು ಪೋಷಣೆ ಮಾಡುವುದರಿಂದ ಮಾತ್ರ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಮುಖ್ಯಗುರು ವೀರಭದ್ರಪ್ಪ ಪಾಟೀಲ್ ಹುಮನಾಬಾದ್ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತರಾದ ನರಸಿಂಹ ಕುಲಕರ್ಣಿ, ಅಂಬರೀಷ ರಂಗನೂರ್, ಶಿಕ್ಷಕರಾದ ಶರಣಬಸಪ್ಪ ಬೊಮ್ಮನಳ್ಳಿ, ಪ್ರೀತಿ ಸಿಂಪಿ, ರಾಜೇಶ್ವರಿ ದಿಗ್ಗಾಂವ್, ಸಾವಿತ್ರಿ ವೈಕುಂಠ, ಭೀಮಪ್ಪ, ವಿಜಯಲಕ್ಷ್ಮಿ ಸ್ವಾದಿ ಇತರರಿದ್ದರು. ವೀರೇಶ ಮಕಾಪ ನಿರೂಪಣೆ ಮಾಡಿದರು, ವಿಷ್ಣುವರ್ಧನ ರೆಡ್ಡಿ ಸ್ವಾಗತಿಸಿದರು, ಅನಿಲ್ ಷನ್ಮುಖ ವಂದಿಸಿದರು.

