ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬದಲು ಗುಣಮಟ್ಟ ಸುಧಾರಣೆ ಮಾಡಿ ಮುಂದುವರೆಸಲು ಎಂಎಲ್ಸಿ ತಳವಾರ ಸಾಬಣ್ಣ ಆಗ್ರಹ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಕರ್ನಾಟಕ ರಾಜ್ಯದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಭಾರತದ ಉತ್ತಮ ಪ್ರಜೆಗಳಾಗುವ ಉದ್ದೇಶದಿಂದ ರಾಜ್ಯದ ಹಿಂದುಳಿದ ಜಿಲ್ಲಾ ಮಟ್ಟದಲ್ಲಿ ಹಾಸನ, ಚಾಮರಾಜನಗರ, ಹಾವೇರಿ, ಕೊಡಗು, ಕೊಪ್ಪಳ, ಬಾಗಲಕೋಟೆ, ಮಂಡ್ಯ, ಮಹಾರಾಣಿ ಕ್ಲಸ್ಟರ್ ಮತ್ತು ನೃಪತುಂಗ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಮುಂದುವರೆದು, ಪ್ರಸ್ತುತ ಸಚಿವ ಸಂಪುಟ ಉಪ ಸಮಿತಿಯು ಸದರಿ ವಿಶ್ವವಿದ್ಯಾಲಯಗಳನ್ನು ಮುಚ್ಚಲು ತೀರ್ಮಾನಿಸಿರುವುದು ಉನ್ನತ ಶಿಕ್ಷಣ ಪಡೆಯಬೇಕೆಂದು ಭರವಸೆ ಇಟ್ಟುಕೊಂಡಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಮತ್ತು ರಾಜ್ಯದ ಶೈಕ್ಷಣಿಕ ಹಿರಿಮೆಗೆ ಧಕ್ಕೆಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ತಳವಾರ ಸಾಬಣ್ಣ ತಿಳಿಸಿದ್ದಾರೆ.
ವಿಶ್ವವಿದ್ಯಾಲಯಗಳು ಆದಾಯ ತರುವ ಕ್ಷೇತ್ರವಲ್ಲ, ಶಿಕ್ಷಣ ನೀಡುವುದು ಸರಕಾರದ ಕರ್ತವ್ಯ, ಉನ್ನತ ಶಿಕ್ಷಣವು ಪ್ರತಿ ವಿದ್ಯಾರ್ಥಿಯ ಹಕ್ಕು, ವಿಶ್ವವಿದ್ಯಾಲಯಗಳ ಮುಚ್ಚುವಿಕೆ ಈ ಹಕ್ಕನ್ನು ಕಸಿದಂತಾಗುತ್ತದೆ. ಸಾವಿರಾರು ವಿದ್ಯಾರ್ಥಿಗಳು ಊರಿನಿಂದ ದೂರ ಹೋಗಲು ಸಾಧ್ಯವಿಲ್ಲ. ಅವರ ಉನ್ನತ ವ್ಯಾಸಂಗಕ್ಕೆ ತೊಂದರೆಯಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಕಷ್ಟವಾಗುತ್ತದೆ, ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣ ಕುಂಠಿತಗೊಳ್ಳುತ್ತದೆ. ವಿಶ್ವವಿದ್ಯಾಲಯಗಳನ್ನು ಮುಚ್ಚುವುದರಿಂದ ಬೋಧಕ-ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಮತ್ತು ಈಗಾಗಲೇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಾರೆ ಮತ್ತು ಹೊಸ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದುವರೆದು ಬಡ ಗ್ರಾಮೀಣ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಿರುವ ವಿಶ್ವವಿದ್ಯಾಲಯಗಳಿಗೆ ಸುಮಾರು ರೂ.342 ಕೋಟಿ ನೀಡಲು ಸಾಧ್ಯವಿಲ್ಲ ಎಂದು ಹೇಳುವ ಸರಕಾರ ಬಡ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವೇ? ನೂತನ ವಿಶ್ವವಿದ್ಯಾಲಯಗಳನ್ನು ದ್ವೇಷ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ತುಂಬಾ ಶೋಚನೀಯ ಸ್ಥಿತಿಯಾಗಿದೆ. ಬಡವರಿಗೆ ಕೊಡಬೇಕಾದ ಶಿಕ್ಷಣದ ಗ್ಯಾರಂಟಿಗೆ ಇದು ಕೊಕ್ಕೆ ಹಾಕಿದಂತಾಗುತ್ತದೆ. ಹಾಗೆಯೇ ಸರಕಾರಿ ವಿಶ್ವವಿದ್ಯಾಲಯಗಳನ್ನು ಕುತ್ತಿಗೆ ಹಿಸುಕಿ ಖಾಸಗಿ ವಿಶ್ವವಿದ್ಯಾಲಯಗಳಿಗೆ ಪೋಷಣೆ ಮಾಡಿದಂತಾಗುತ್ತದೆ. ಬಡವರ ಮತ್ತು ಸಾಮಾಜಿಕ ನ್ಯಾಯದ ಪರವೆಂದು ಹೇಳುವ ತಾವು ಈ ರೀತಿಯ ದ್ವೇಷದ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಖಂಡನೀಯ. ತಮ್ಮ ಘನತೆಗೆ ತಕ್ಕಂತೆ ನೂತನ ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರದಿಂದ ಹೊರ ಬಂದು ಬಡ ಮತ್ತು ತೀರಾ ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಿರ್ದಿಷ್ಟ ಪ್ರದೇಶಗಳ ವಿಶ್ವವಿದ್ಯಾಲಯ ಮುಚ್ಚಿದರೆ, ಆ ಪ್ರದೇಶದ ಜನರು ಶಿಕ್ಷಣದಿಂದ ವಂಚಿತರಾಗುತ್ತಾರೆ ಹಾಗೂ ಉದ್ಯೋಗ ಅವಕಾಶ ಕಡಿಮೆಯಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಾದೇಶಿಕ ಅಸಮಾನತೆ ಸರಿಪಡಿಸಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಹಾಸನ, ಚಾಮರಾಜನಗರ, ಹಾವೇರಿ, ಕೊಡಗು, ಕೊಪ್ಪಳ, ಬಾಗಲಕೋಟೆ, ಮಂಡ್ಯ, ಮಹಾರಾಣಿ ಕ್ಲಸ್ಟರ್ ಮತ್ತು ನೃಪತುಂಗ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬದಲು ಗುಣಮಟ್ಟ ಸುಧಾರಣೆ ಮಾಡಿ ಮುಂದುವರೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.