ವಾಡಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮೇಲಿನ ಹಲ್ಲೆಗೆ ಉಮೇಶ್ ಜಾಧವ ಖಂಡನೆ, ಆರೋಪಿಗಳ ಬಂಧನಕ್ಕೆ ಆಗ್ರಹ
ನಾಗಾವಿ ಎಕ್ಸಪ್ರೆಸ್
ವಾಡಿ: ವಾಟ್ಸಪ್ ಸ್ಟೇಟಸ್ ಗೆ ಸಂಬಂಧಿಸಿದಂತೆ ವಾಡಿ ಪುರಸಭೆ ವ್ಯಾಪ್ತಿಯಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಮಾಜಿ ಸಂಸದ ಡಾ. ಉಮೇಶ್ ಜಾಧವ ತೀವ್ರವಾಗಿ ಖಂಡಿಸಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ವೀರಣ್ಣ ಯಾರಿ ಅವರನ್ನು ಶನಿವಾರ ಭೇಟಿ ಮಾಡಿ ಧೈರ್ಯ ತುಂಬಿ ಯೋಗಕ್ಷೇಮ ವಿಚಾರಿಸಿದ ಅವರು, ವಾಡಿ ಪಟ್ಟಣದಲ್ಲಿ ನೀರಿನ ಸಮಸ್ಯೆ ಸಾಮಾನ್ಯವಾಗಿದೆ. ಸಾರ್ವಜನಿಕರು ಆ ಬಗ್ಗೆ ಪ್ರಶ್ನೆ ಕೇಳುವುದು ಅಪರಾಧವಲ್ಲ. ಆದರೆ ಆ ವಿಷಯವನ್ನೇ ಹತ್ತಿಕ್ಕಲು ಹಲ್ಲೆ ನಡೆಸುವುದು, ಸುಳ್ಳು ಕೇಸುಗಳು ದಾಖಲಿಸುವುದು ಸರ್ಕಾರದ ದೌರ್ಜನ್ಯವಲ್ಲದೆ ಏನು ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ಬೆದರಿಸುವ ಹೀನ ಪ್ರಯತ್ನ ನಡೆಯುತ್ತಿದೆ. ಆರೋಪಿಗಳನ್ನು ತಕ್ಷಣ ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು. ನ್ಯಾಯಸಮ್ಮತ ತನಿಖೆ ನಡೆಸಬೇಕು, ಜನಸಾಮಾನ್ಯರ ಹಕ್ಕುಗಳನ್ನು ಸಂರಕ್ಷಿಸುವುದು ಆಡಳಿತದ ಕರ್ತವ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಮುಖಂಡರಾದ ಬಸವರಾಜ ಬೆಣ್ಣೂರಕರ್, ಬಸವರಾಜ ಪಂಚಾಳ, ರಮೇಶ್ ಕಾರಬಾರಿ, ವಿಠ್ಠಲ್ ನಾಯಕ, ರಾಜು ಮುಕ್ಕಣ್ಣ, ಶಂಕರ ಕಾಶೇಟ್ಟಿ, ಕಿಶನ್ ಜಾಧವ, ರಾಜೇಶ್ ಅಗರವಾಲ್, ದೌಲತರಾವ ಚಿತಾಪೂರಕರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

