ಸಮುದಾಯದ ಬೇಡಿಕೆಗಳ ಈಡೇರುವವರೆಗೆ ಮಹರ್ಷಿ ವಾಲ್ಮೀಕಿ ಜಯಂತಿ ಬಹಿಷ್ಕಾರ: ಭೀಮರಾಯ ದೊರಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶಗಳು ಹಾಗೂ ಕರ್ನಾಟಕ ಸರ್ಕಾರದ ಆದೇಶಗಳಿದ್ದರೂ ವಿವಾದಿತ ಎಸ್ಟಿ ಜಾತಿ ಪ್ರಮಾಣಪತ್ರಗಳನ್ನು ನೀಡುತ್ತಿರುವ ಕುರಿತು ತನಿಖೆ ನಡೆಸಿ, ಅನರ್ಹರಿಗೆ ನೀಡಿರುವುದು ದೃಢಪಟ್ಟ ಪ್ರಮಾಣಪತ್ರಗಳನ್ನು ರದ್ದುಪಡಿಸುವುದು, ನೈಜ ಪರಿಶಿಷ್ಟ ಪಂಗಡದವರ ಶೈಕ್ಷಣಿಕ ಹಾಗೂ ರಾಜಕೀಯ ಹಕ್ಕುಗಳನ್ನು ರಕ್ಷಿಸುವುದು, ಬಾಕಿ ಇರುವ ಶ್ರೀ ಮಹರ್ಷಿ ವಾಲ್ಮೀಕಿ ಭವನಗಳ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗಳು ಈಡೇರುವವರೆಗೆ ಚಿತ್ತಾಪುರ ತಾಲೂಕು ಆಡಳಿತ ವತಿಯಿಂದ ನಡೆಯುವ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸಲಾಗುವುದು ಎಂದು ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾಯ ದೊರಿ ಹೇಳಿದರು.
ಪ್ರಜಾ ಸೌಧ ಸಭಾಂಗಣದಲ್ಲಿ ಸೋಮವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ, ಈ ಕುರಿತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ.ರಘುಮೂರ್ತಿ ಅವರಿಗೆ ಬರೆದ ಮನವಿ ಪತ್ರವನ್ನು ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ ಅವರಿಗೆ ಸಲ್ಲಿಸಿದರು.
ನಮ್ಮ ಸಮುದಾಯದ ಪರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಈವರೆಗೆ ತೃಪ್ತಿಕರವಾದ ಲಿಖಿತ ಉತ್ತರ ಅಥವಾ ಪರಿಣಾಮಕಾರಿ ಪರಿಹಾರ ದೊರೆತಿಲ್ಲ. ಆದ್ದರಿಂದ, ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಿವಾದಿತ ಎಸ್ಟಿ ಜಾತಿ ಪ್ರಮಾಣಪತ್ರಗಳ ತನಿಖೆ ಮತ್ತು ರದ್ದುಪಡಿಸಬೇಕು, ನ್ಯಾಯಾಲಯ ಮತ್ತು ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ನೈಜ ಎಸ್ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳ ರಕ್ಷಣೆ ಮಾಡಬೇಕು, ನೈಜ ಎಸ್ಟಿ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ರಕ್ಷಣೆ ಮಾಡಬೇಕು, ಮಹರ್ಷಿ ವಾಲ್ಮೀಕಿ ಭವನಗಳ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರ ಮಾಡಬೇಕೆಂಬ ವಿವಿಧ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ನಮ್ಮ ಸಮುದಾಯದ ಬಹುಕಾಲದ ಬೇಡಿಕೆಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರಾದ ರಾಮಕೃಷ್ಣ ಜಮಾದಾರ್, ಸುಭಾಶ್ಚಂದ್ರ, ರಾಜು ದೊರೆ, ಭಾಗು ದೊರೆ, ಜಗು ಮಾಲಗತ್ತಿ, ಮಹಾಂತೇಶ ಲಾಡ್ಲಾಪೂರ, ಸಿದ್ದು ಅವರಾದ, ಸಾಬಣ್ಣ ಲಾಡ್ಲಾಪೂರ, ಮೌನೇಶ್ ಲಾಡ್ಲಾಪೂರ, ಸಾಬಣ್ಣ ಚಾಮನೂರು, ಭೀಮು ದಿಗ್ಗಾಂವ, ಮೌನೇಶ್ವರ ದಿಗ್ಗಾಂವ ಸೇರಿದಂತೆ ಇತರರು ಇದ್ದರು.

