ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನಮ್ಮ ಕರ್ನಾಟಕ ಸೇನೆ ಮನವಿ | ಪಡುಕೋಟೆ ಒಬ್ಬ ಕನ್ನಡಪರ ಹೋರಾಟಗಾರ ರೌಡಿಯಂತೆ ಪರಿಗಣಿಸಬೇಡಿ: ಗುತ್ತೇದಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬೆಂಗಳೂರಿನ ಶಿವಾಜಿ ನಗರದಲ್ಲಿ ಜಿಬಿಎ ಅಧಿಕಾರಿಗಳು ಪಾದಚಾರಿ ಮಾರ್ಗವನ್ನು ತೆರವುಗೊಳಿಸುವ ಸಂದರ್ಭದಲ್ಲಿ ನಡೆದ ಅಚಾತುರ್ಯ ಘಟನೆಗೆ ವಿಷಾದನೀಯ, ಇದೇ ವಿಚಾರವನ್ನು ಮುಂದೆ ಇಟ್ಟುಕೊಂಡು ಸರ್ಕಾರ ಮತ್ತು ಅಧಿಕಾರಿಗಳು ಕನ್ನಡಪರ ಹೋರಾಟಗಾರ ಬಸವರಾಜ್ ಪಡುಕೋಟೆ ಯಾವುದೋ ರೌಡಿಗಳ ಹಾಗೆ ಅವರನ್ನು ಪರಿಗಣಿಸಬೇಡಿ ಎಂದು ನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ಸುನೀಲ್ ಗುತ್ತೇದಾರ ಮನವಿ ಮಾಡಿದರು.
ಈ ಕುರಿತು ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ ಅವರಿಗೆ ನಮ್ಮ ಕರ್ನಾಟಕ ಸೇನೆ ವತಿಯಿಂದ ಬರೆದ ಮನವಿ ಪತ್ರವನ್ನು ಶುಕ್ರವಾರ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿ ಮಾತನಾಡಿದ ಅವರು, ಬಸವರಾಜ್ ಪಡುಕೋಟೆಯವರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸದೆ ಕೇವಲ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ಪರಿಗಣಿಸಿ, ಅವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಬಸವರಾಜ್ ಪಡಕೋಟೆ ಅವರು ಮತ್ತು ಜಿಬಿಎ ಅಧಿಕಾರಿಗಳ ಮಧ್ಯೆ ನಡೆದ ಘಟನೆ ಬಗ್ಗೆ ನಾವು ವಿಷಾದಿಸುತ್ತೇವೆ. ಆದರೆ ಅಲ್ಲಿ ಘಟನೆ ನಡೆದ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಬಸವರಾಜ್ ಪಡುಕೋಟೆಯವರ ಜೊತೆ ಅಸಭ್ಯವಾಗಿ ಮತ್ತು ನಿಂದನಾತ್ಮಕವಾಗಿ ಮಾತನಾಡಿದ್ದಕ್ಕಾಗಿ ಕೋಪಗೊಂಡ ಕಾರ್ಯಕರ್ತರು ಮತ್ತು ಕೆಲ ವ್ಯಾಪಾರಸ್ಥರು ಅಧಿಕಾರಿಗಳೊಡನೆ ಅನುಚಿತವಾಗಿ ನಡೆದುಕೊಂಡಿದ್ದು ಇರುತ್ತದೆ ಎಂದರು.
ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಕನ್ನಡದ ಬಾವುಟ, ದೇವಸ್ಥಾನ, ಧ್ವಜ ಸ್ಥಂಭ ಅಥವಾ ಇತರೆ ಕಾರ್ಯಾಚರಣೆ ಮಾಡುವಾಗ ಸ್ಥಳೀಯ ಕನ್ನಡ ಪರ ಸಂಘದ ಜೊತೆಗೆ ಸೌಹಾರ್ದಾಯುತ ಚರ್ಚೆ ಆಗಿದ್ದರೆ, ಈ ಘಟನೆ ಆಗುತ್ತಲೇ ಇರಲಿಲ್ಲ. ನಮ್ಮ ಸಂಘಟನೆ ಕೂಡ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದೇವೆ. ಆದರೆ ಈ ಘಟನೆಗೆ ಕೇವಲ ಬಸವರಾಜ್ ಪಡುಕೋಟೆ ಮತ್ತು ವ್ಯಾಪಾರಸ್ಥರು ಅಷ್ಟೇ ಕಾರಣಿಕರ್ತರಲ್ಲ ಬದಲಿಗೆ ಅಧಿಕಾರಿಗಳ ನಡವಳಿಕೆಯು ಕಾರಣವಾಗಿರುತ್ತದೆ ಎಂಬುದು ಗಮನಿಸಬೇಕಾದ ವಿಷಯವಾಗಿರುತ್ತದೆ ಎಂದು ತಿಳಿಸಿದರು.
ವಾಡಿ ವಲಯ ಅಧ್ಯಕ್ಷ ಸಿದ್ದು ಪೂಜಾರಿ ಮಾತನಾಡಿ, ಸುಮಾರು 30 ವರ್ಷಗಳಿಂದ ಕನ್ನಡ ನಾಡು, ನುಡಿ, ಗಡಿಯ ವಿಚಾರವಾಗಿ ಹೋರಾಟ ಮಾಡುತ್ತಾ ಬಂದಿರುವ ಬಸವರಾಜ್ ಪಡುಕೋಟೆಯವರನ್ನು ಒಬ್ಬ ಕನ್ನಡ ಪರ ಹೋರಾಟಗಾರ ಎಂಬುದನ್ನು ಮನದಟ್ಟು ಮಾಡಿಕೊಂಡು, ಅವರ ಮೇಲೆ ದೊಡ್ಡ ಮಟ್ಟದ ಕಠಿಣ ಕಾನೂನು ಕ್ರಮ ಕೈಗೊಳ್ಳದೆ ಅವರೊಂದಿಗೆ ಸ್ವಲ್ಪ ಮಾನವೀಯತೆಯ ದೃಷ್ಟಿಯಲ್ಲಿ ಅಲ್ಪ ಪ್ರಮಾಣದಲ್ಲಿ ಶಿಕ್ಷೆ ನೀಡಿ, ಕ್ಷಮಿಸಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ರಾಹುಲ್ ಸಿಂದಗಿ, ಸಂಘಟನಾ ಸಂಚಾಲಕ ಅಂಬರೀಷ ಮಾಳಗಿ, ಪ್ರಭು ಹಲಕರ್ಟಿ, ನಾಗರಾಜ ಬನಸೋಡೆ, ಪ್ರಭಾಕರ ಪೂಜಾರಿ, ಶಶಿಸಾಗರ, ರವೀಂದ್ರ, ಜೈ ಭೀಮ ವಾಲೇಕರ್, ಬಸವರಾಜ ಗುತ್ತೇದಾರ, ಪ್ರೇಮ್ ಜೋಶಿ ಸೇರಿದಂತೆ ಇತರರು ಇದ್ದರು.

