ಕಾನೂನಿನ ಚೌಕಟ್ಟಿನಲ್ಲಿ ಹಬ್ಬಗಳು ಸಂಭ್ರಮದಿಂದ ಆಚರಿಸಿ: ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಹಬ್ಬಗಳ ಸಂಭ್ರಮದ ಜೊತೆಗೆ ಸೌಹಾರ್ದತೆ ಮತ್ತು ಕಾನೂನಿನ ಗೌರವವೂ ಅಗತ್ಯ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗಣೇಶ ಚತುರ್ಥಿ, ಈದ್ ಮಿಲಾದ್ ಸೇರಿದಂತೆ ಪ್ರತಿಯೊಂದು ಹಬ್ಬ ಮತ್ತು ಉತ್ಸವವನ್ನು ಎಲ್ಲರೂ ಅತ್ಯಂತ ಸಂಭ್ರಮದಿಂದ ಆಚರಿಸೋಣ. ಆದರೆ ನಮ್ಮ ಆಚರಣೆಗಳು ಸಾರ್ವಜನಿಕರ ನೆಮ್ಮದಿಗೆ ಧಕ್ಕೆಯಾಗದಂತೆ ಹಾಗೂ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳು ಮತ್ತು ಕಾನೂನಿನ ವ್ಯಾಪ್ತಿಯಲ್ಲಿಯೇ ಇರಬೇಕು ಎಂದು ಮನವಿ ಮಾಡಿದ್ದಾರೆ.
ಹಬ್ಬದ ಸಂದರ್ಭಗಳಲ್ಲಿ ಡಿಜೆ ಮತ್ತು ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಕಾನೂನು ಪ್ರತಿಯೊಬ್ಬರಿಗೂ ಒಂದೇ ಆಗಿದ್ದು, ಸಾರ್ವಜನಿಕರಿಗೆ ಶಬ್ದ ಮಾಲಿನ್ಯದಿಂದ ಅಡಚಣೆಯಾಗಿ ‘112’ ತುರ್ತು ಸಂಖ್ಯೆಗೆ ದೂರು ನೀಡುವಂತಹ ಸನ್ನಿವೇಶ ನಿರ್ಮಾಣವಾಗಬಾರದು.
ಮಹಾಪುರುಷರ ಜಯಂತಿಗಳನ್ನು ಆಚರಿಸುವಾಗ ಕೇವಲ ದೊಡ್ಡ ಧ್ವನಿವರ್ಧಕಗಳ ಶಬ್ದದ ವೈಭವಕ್ಕೆ ಸೀಮಿತವಾಗದೆ, ಅವರ ವಿಚಾರ, ಸಿದ್ಧಾಂತ ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ನಮ್ಮ ನಾಡಿನ ಉತ್ತಮ ಸಂಪ್ರದಾಯ ಮತ್ತು ಸೌಹಾರ್ದತೆಯನ್ನು ಮುಂದಿನ ಪೀಳಿಗೆಗೆ ಸರಿ ದಾರಿಯಲ್ಲಿ ತಲುಪಿಸೋಣ. ನಿಯಮಗಳನ್ನು ಗೌರವಿಸಿ, ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ಶಾಂತಿಯುತವಾಗಿ ಸಂಭ್ರಮಿಸುವಂತೆ ಸಚಿವರು ಮನವಿ ಮಾಡಿದ್ದಾರೆ.

