ಹೊಕ್ರಾಣಿ ಅಶ್ವಿನಿ ಅತ್ಯಾಚಾರ ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಲು ಬೆಳಮಗಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ದಲಿತ ಸಮುದಾಯದ ಕು. ಅಶ್ವಿನಿ ಅವರ ಮೇಲೆ ಅತ್ಯಾಚಾರವೇಸಗಿ ಕೊಲೆ ಮಾಡಿ ಬಾವಿಗೆ ಎಸೆದಿರುವ ಘಟನೆ ಅತ್ಯಂತ ಅಮಾನವೀಯ ಮತ್ತು ಖಂಡನಿಯವಾಗಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಮಾದಿಗ ಸಮಾಜದ ಯುವ ಮುಖಂಡ ರವಿ ಬೆಳಮಗಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ದಲಿತರು ಮತ್ತು ಮಹಿಳೆಯರ ಮತ್ತು ದುರ್ಬಲ ವರ್ಗದವರ ಮೇಲೆ ದಿನೇ ದಿನೇ ಕೊಲೆ ಪ್ರಕರಣ ಮತ್ತು ಅತ್ಯಾಚಾರ ಅಧರ್ಮ, ಅನ್ಯಾಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದು ಮಾನವ ಕುಲಕ್ಕೆ ತಲೆ ತಗ್ಗಿಸುವ ಕಳಂಕಕಾರಿ ಘಟನೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂತಹ ಆಘಾತಕಾರಿ ಘಟನೆಗಳನ್ನು ರಾಜ್ಯದ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ, ಇಂದಿನ ಆಧುನಿಕ ಯುಗದಲ್ಲಿ ಪ್ರತಿ ಪ್ರಜೆಗೂ ಸಂವಿಧಾನಾತ್ಮಕ ಜೀವ ಗೌರವ ಮತ್ತು ಸುರಕ್ಷತೆ, ರಕ್ಷಣೆ ಮಾಡುವುದು ಸಂವಿಧಾನಾತ್ಮಕ ಅಂಗದಲ್ಲಿ ಐತಿಹಾಸಿಕವಾದ ದಾಖಲೆಗಳಿದ್ದರೂ ಇಂತಹ ಅಮಾನವೀಯ ಕೃತ್ಯಗಳಿಂದ ಸಂವಿಧಾನಾತ್ಮಕ ರಕ್ಷಣೆ ಇಲ್ಲದೆ ಜನಸಾಮಾನ್ಯರು ಭಯಬೀತರಾಗಿ ಬದುಕಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಶ್ವಿನಿ ಪ್ರಕರಣದ ತನಿಖೆಯನ್ನು ರಾಜಕೀಯದ ಯಾವುದೇ ಪ್ರಭಾವಿಗಳಿಗೆ ಮಣಿಯದೇ ನ್ಯಾಯಸಮ್ಮತವಾದ ನಿಷ್ಪಕ್ಷಪಾತವಾಗಿ ಮಾಡಬೇಕು, ದು:ಖ್ಖಿತ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕಾಗಿದೆ. ಇಂತಹ ಘಟನೆಗಳನ್ನು ಕರ್ನಾಟಕ ಸರ್ಕಾರ ಸಾಕ್ಷಾಧಾರಗಳನ್ನ ವೈಜ್ಞಾನಿಕವಾಗಿ ಸಂಗ್ರಹಿಸಿ ತನಿಖೆಯನ್ನು ತೀವ್ರಗತಿಯಲ್ಲಿ ನಡೆಸಿ ಮುಂದೆ ಇಂತಹ ಘಟನೆಗಳನ್ನು ಮರುಕಳಿಸಿದಂತೆ ನೋಡಿಕೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ದುಃಖ್ಖಿತ ಕುಟುಂಬ ವರ್ಗಕ್ಕೆ ಸರ್ಕಾರ ಸೂಕ್ತ ಪರಿಹಾರ ಒದಗಿಸಿ ಅಗತ್ಯ ಭದ್ರತೆ ಹಾಗೂ ಸರ್ಕಾರಿ ನೆರವು ನೀಡಬೇಕು, ಕುಟುಂಬದ ಸದಸ್ಯರಿಗೆ ನಿಯಮಾನುಸಾರ ಪುನರ್ವಸತಿ ಮತ್ತು ಅಗತ್ಯ ಕಲ್ಯಾಣ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

