ಚಿತ್ತಾಪುರದಲ್ಲಿ ವಿಜಯದಶಮಿ ಪ್ರಯುಕ್ತ ಅದ್ದೂರಿ ಆರ್.ಎಸ್.ಎಸ್ ಪಥ ಸಂಚಲನ | ಸಂಘದ ಶಾಖೆಗಳು ಮುಕ್ತವಾದ ಬಯಲು ವಿಶ್ವವಿದ್ಯಾಲಯಗಳಿದ್ದಂತೆ: ರಾಮಚಂದ್ರ ಏಡಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿಜಯ ದಶಮಿ ಪ್ರಯುಕ್ತ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ (ಆರ್.ಎಸ್.ಎಸ್,) ಶನಿವಾರ ಬೃಹತ್ ಪಥ ಸಂಚಲನ ನಡೆಯಿತು. ಸ್ವಯಂ ಸೇವಕರ ಪಥ ಸಂಚಲನ ಸಾಗುವ ರಸ್ತೆ ಮಧ್ಯೆ ಸಾರ್ವಜನಿಕರು ಹೂಮಳೆ ಸುರಿಸಿದರು.
ಪಥ ಸಂಚಲನದಲ್ಲಿ ತಾಯಿ ಭಾರತಮಾತೆಯ, ಡಾ.ಕೇಶವ ಬಲಿರಾಮ ಹೆಡಗೇವಾರ್, ಮಾಧವ ಗೋಳ್ವಾಲ್ಕರ್ ಅವರ ಭಾವಚಿತ್ರಗಳು ಗಮನ ಸೆಳೆಯಿತು. ಪಥಸಂಚಲನದಲ್ಲಿ ನೂರಾರು ಗಣವೇಷಧಾರಿ ಸ್ವಯಂಸೇವಕರು ಬ್ಯಾಂಡ್ ನಿನಾದದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ಪಥಸಂಚಲನ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಊರುಗಳಿಂದ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.
ಪಟ್ಟಣದ ಬಜಾಜ್ ಕಲ್ಯಾಣ ಪ್ರಾರಂಭವಾದ ಪಥ ಸಂಚಲನ ಬಸ್ ನಿಲ್ದಾಣ, ಡಾ. ಬಿ.ಆರ್. ಅಂಬೇಡ್ಕರ ವೃತ್ತ, ಭುವನೇಶ್ವರಿ ವೃತ್ತ, ಜನತಾ ವೃತ್ತ, ನಾಗಾವಿ ವೃತ್ತ, ನಂದಕೀಶೋರ ಬಜಾಜ ಮನೆಯ ಎದುರುಗಡೆ, ಶ್ರೀ ಸೇವಾಲಾಲ್ ವೃತ್ತ, ಪುರಸಭೆ ಕಾರ್ಯಾಲಯ, ಹಳೇ ಗಂಜ್ ವೃತ್ತ, ಕಾಶಿಗಲ್ಲಿ ಗಣೇಶ ಮಂದಿರ, ಲಾಡ್ಜಿಂಗ್ ಕ್ರಾಸ್ ಮೂಲಕ ಪುನಃ ಬಜಾಜ್ ಕಲ್ಯಾಣ ಮಂಟಪಕ್ಕೆ ತಲುಪಿ ಸಮಾವೇಶಗೊಂಡಿತ್ತು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಆರ್.ಎಸ್.ಎಸ್ ಕರ್ನಾಟಕ ಉತ್ತರ ಪ್ರಾಂತದ ಸಹ ಬೌದ್ಧಿಕ ಪ್ರಮುಖ ರಾಮಚಂದ್ರ ಏಡಕೆ, ಸಂಘದ ಶಾಖೆಗಳು ಪ್ರತಿಯೊಬ್ಬರಿಗೂ ಮುಕ್ತವಾದ ಬಯಲು ವಿಶ್ವವಿದ್ಯಾಲಯಗಳಿದ್ದಂತೆ. ಇಲ್ಲಿ ಯಾವುದೇ ಭೇದಭಾವವಿಲ್ಲದೆ ಯಾರು ಬೇಕಾದರೂ ಭಾಗವಹಿಸಿ ದೇಶಭಕ್ತಿ, ಶಿಸ್ತು ಮತ್ತು ಸಂಘಟನಾತ್ಮಕ ಗುಣಗಳನ್ನು ಮೈಗೂಡಿಸಿಕೊಳ್ಳಬಹುದು ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಸಂಘದ ಪಾತ್ರವನ್ನು ಪ್ರಶ್ನಿಸುವವರು ಮೊದಲು ಆರ್.ಎಸ್.ಎಸ್ ಇತಿಹಾಸವನ್ನು ಸರಿಯಾಗಿ ಪರಿಶೀಲಿಸಬೇಕು. ‘ವಂದೇ ಮಾತರಂ’ ಎಂಬುದು ಯಾವುದೇ ಒಂದು ರಾಜಕೀಯ ಪಕ್ಷದ ಗೀತೆಯಲ್ಲ, ಅದು ಇಡೀ ಭಾರತದ ರಾಷ್ಟ್ರೀಯ ಭಾವನೆಯ ಪ್ರತೀಕವಾಗಿದೆ ಎಂದು ತಿಳಿಸಿದರು.
ಭಾರತದ ರಾಜಕೀಯ ಇತಿಹಾಸದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.) ನಡೆದುಬಂದ ಹಾದಿ ಮತ್ತು ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ಅವರ ಕಾಲದ ಸೈದ್ಧಾಂತಿಕ ಸಂಘರ್ಷಗಳು ಇಂದಿಗೂ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ತೀವ್ರ ರಾಜಕೀಯ ವಿರೋಧ ಹಾಗೂ ಸವಾಲುಗಳ ನಡುವೆಯೂ ಸಂಘವು ಇಂದು ಬೃಹತ್ತಾಗಿ ಬೆಳೆದು ನಿಂತಿರುವುದು ಒಂದು ಪ್ರಮುಖ ಐತಿಹಾಸಿಕ ವಿದ್ಯಮಾನವಾಗಿದೆ ಎಂದು ಹೇಳಿದರು.
ಆರ್.ಎಸ್.ಎಸ್. ಬೆಂಬಲಿಗರು ಮತ್ತು ರಾಷ್ಟ್ರೀಯತಾವಾದಿ ಚಿಂತಕರ ಪ್ರಕಾರ, ಸಂಘವು ಆರಂಭದಿಂದಲೂ ಪ್ರಭುತ್ವದ ತೀವ್ರ ಸವಾಲುಗಳನ್ನು ಎದುರಿಸಬೇಕಾಯಿತು. 1948ರಲ್ಲಿ ಮಹಾತ್ಮಾ ಗಾಂಧೀಜಿಯವರ ಹತ್ಯೆಯ ನಂತರ ಮತ್ತು 1975ರಲ್ಲಿ ಇಂದಿರಾ ಗಾಂಧಿಯವರ ಅವಧಿಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಆರ್.ಎಸ್.ಎಸ್. ಮೇಲೆ ನಿಷೇಧ ಹೇರಲಾಗಿತ್ತು. ಆದಾಗ್ಯೂ, ತಳಮಟ್ಟದ ಸ್ವಯಂಸೇವಕರ ನಿರಂತರ ಶ್ರಮ, ಸಮಾಜ ಸೇವೆ ಮತ್ತು ರಾಷ್ಟ್ರೀಯತಾವಾದಿ ಚಿಂತನೆಗಳ ಬಲದಿಂದಾಗಿ ಸಂಘವು ಇಂದು ಜಗತ್ತಿನ ಅತಿ ದೊಡ್ಡ ಸ್ವಯಂಸೇವಾ ಸಂಸ್ಥೆಯಾಗಿ ಬೆಳೆದಿದೆ ಎಂದರು.
ಇದೇ ವೇಳೆ ಕನ್ನಡ ಭಾಷೆ ಮತ್ತು ಸಂಸ್ಕೃತಿ ರಕ್ಷಣೆಯ ಬಗ್ಗೆ ಮಾತನಾಡಿದ ಅವರು, “ದೈನಂದಿನ ವ್ಯವಹಾರದಲ್ಲಿ ‘ಮಮ್ಮಿ, ಡ್ಯಾಡಿ’ ಎನ್ನುವ ಬದಲು ‘ಅಮ್ಮ, ಅಪ್ಪ’ ಹಾಗೂ ‘ಗುಡ್ ಮಾರ್ನಿಂಗ್’ ಬದಲು ‘ಶುಭೋದಯ’ ಎಂಬ ಕನ್ನಡ ಪದಗಳನ್ನು ಬಳಸುವ ಮೂಲಕ ನಮ್ಮ ನುಡಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ,” ಎಂದು ಕರೆ ನೀಡಿದರು.
ಉದ್ಯಮಿ ರಾಜಶೇಖರ್ ಯದಲಾಪೂರ, ಜಿಲ್ಲಾ ಕಾರ್ಯವಾಹ ಅಶೋಕ ಪಾಟೀಲ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್, ಮುಖಂಡರಾದ ವಿಠಲ್ ನಾಯಕ, ನಾಗರಾಜ ಭಂಕಲಗಿ, ಆನಂದ ಪಾಟೀಲ ನರಿಬೋಳ, ಈರಣ್ಣ ಯಾರಿ, ತಮ್ಮಣ್ಣ ಡಿಗ್ಗಿ, ಗೋಪಾಲ ರಾಠೋಡ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ವಿಜಯ ಮಹಾಂತೇಶ, ಪ್ರಲ್ಹಾದ ವಿಶ್ವಕರ್ಮ, ಸಂತೋಷ ಹಾವೇರಿ, ಮಲ್ಲಿನಾಥ ಅವರಾದಿ, ನಟರಾಜ ಶಿಲ್ಪಿ, ಅಶ್ವಥ್ ರಾಠೋಡ, ಅಂಬರೀಷ್ ಸುಲೇಗಾಂವ, ಧನರಾಜ್ ದೇಶಪಾಂಡೆ, ರಮೇಶ್ ಬೊಮ್ಮನಳ್ಳಿ, ಪಂಕಜ್ ಗೌಡ್, ಗಿರೀಶ್ ಭಜಂತ್ರಿ, ಶಿವರಾಮ ಚವ್ಹಾಣ, ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಗಣವೇಷಧಾರಿಗಳು ಭಾಗವಹಿಸಿದ್ದರು. ಅರುಣ್ ಪೊದ್ದಾರ್ ಸ್ವಾಗತಿಸಿದರು, ಸಂತೋಷ ಅಲ್ಲೂರಕರ್ ನಿರೂಪಿಸಿದರು. ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

