ನಾಲವಾರದಲ್ಲಿ ನ.1 ರಂದು ಸದ್ಗುರು ಶ್ರೀ ಕೋರಿಸಿದ್ದೇಶ್ವರ ಪುಣ್ಯಾರಾಧನಾ ಮಹೋತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರವಾದ ನಾಲವಾರ ಸಂಸ್ಥಾನ ಮಠದಲ್ಲಿ ನವೆಂಬರ್ 1 ರಂದು ಭಾನುವಾರ ಶ್ರೀಮಠದ ಮೂಲಪುರುಷ, ಕರ್ತೃ ಶ್ರೀ ಕೋರಿಸಿದ್ದೇಶ್ವರ ಮಹಾಶಿವಯೋಗಿಗಳ ಪುಣ್ಯಾರಾಧನಾ ಮಹೋತ್ಸವ ಭಕ್ತಿ-ಭಾವದಿಂದ ನೆರವೇರಲಿದೆ.
ಪುಣ್ಯಾರಾಧನೆಯ ಅಂಗವಾಗಿ ಮಠದ ಪೀಠಾಧಿಪತಿ ಶ್ರೀ ಡಾ. ಸಿದ್ದತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ಪಾವನ ಸಾನ್ನಿಧ್ಯದಲ್ಲಿ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ಮತ್ತು ಮಹಾಮಂಗಳಾರತಿ ನೆರವೇರಲಿದೆ.
ಬಳಿಕ ಶ್ರೀಮಠದ ಸದ್ಭಕ್ತರಿಂದ ಪೂಜ್ಯರಿಗೆ ಮಹಾಪಾದಪೂಜೆ ಹಾಗೂ ವಿಶೇಷ ಪ್ರಸಾದ ವಿತರಣೆ ನಡೆಯಲಿದೆ. ಲಕ್ಷಾಂತರ ಭಕ್ತರ ಮನೆ-ಮನಗಳನ್ನು ಬೆಳಗಿ ನಾಲವಾರದ ನಂದಾದೀಪವಾಗಿ ಬೆಳಗುತ್ತಿರುವ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಮಹಾಶಿವಯೋಗಿಗಳ ಪುಣ್ಯಾರಾಧನಾ ಕಾರ್ಯಕ್ರಮಕ್ಕೆ ಉಡುಪಿಯ ಖ್ಯಾತ ಸ್ಯಾಕ್ಸು ಫೋನ್ ವಾದಕ ಕುಮಾರ್ ಪ್ರೀತಮ್ ದೇವಾಡಿಗ, ಪ್ರಭಾಕರ್ ದೇವಾಡಿಗ ತಾಳ. ಪ್ರದೀಪ್ ದೇವಾಡಿಗ. ತವೀಲ ತಂಡದವರಿಂದ ವಿಶೇಷ ಸಂಗೀತ ನೀಡುವರು ಸದ್ಭಕ್ತರೆಲ್ಲರೂ ಆಗಮಿಸಿ ದರ್ಶನಾಶೀರ್ವಾದ ಪಡೆಯಬೇಕೆಂದು ಶ್ರೀಮಠದ ವಕ್ತಾರ ಶ್ರೀ ಮಹಾದೇವ ಗಂವ್ಹಾರ ಅವರು ಮನವಿ ಮಾಡಿದ್ದಾರೆ.
ಯೋಗಶಕ್ತಿಯ ಮಹಾಂತರು:
ಕಾಖಂಡಕಿಯ ಸದ್ಗುರು ಶ್ರೀ ಮಲ್ಲಾರಾಧ್ಯರ ಪರಮ ಶಿಷ್ಯರಾಗಿ, ಗುರು ಏರಿದ ಅಗ್ನಿಪೀಠವನ್ನೇರಿ ಗುರುವಿನ ಗುರುವಾಗಿ ಬೆಳಗಿದ ಕೋರಿಸಿದ್ದೇಶ್ವರ ಶಿವಯೋಗಿಗಳು ಲೀಲಾಮೂರ್ತಿಗಳಾಗಿ ಲೋಕವನ್ನು ಉದ್ಧರಿಸಿದ ಮಹಾತ್ಮರಾಗಿದ್ದರು.
18ನೇ ಶತಮಾನದಲ್ಲಿ ಕಲ್ಯಾಣ ನಾಡಿನ ಈ ಪುಣ್ಯ ನೆಲದಲ್ಲಿ ನಡೆದಾಡಿದ ಈ ಮಹಾತ್ಮರು ಜಾತಿ, ಮತ, ಪಂಥಗಳ ಎಲ್ಲೆಯನ್ನು ಮೀರಿ ಮನುಕುಲದ ಒಳಿತಿಗಾಗಿ ಶ್ರಮಿಸಿದರು. ಅನೇಕ ಪವಾಡಗಳನ್ನು ತೋರಿ, ಬೇಡಿದವರಿಗೆ ಬೇಡಿದ್ದನ್ನು ನೀಡಿ ಅನುಗ್ರಹಿಸಿದ ಅವರು, ನಾಲವಾರದ ಹಿರೇಮಠದ ನೀಲಮ್ಮ ತಾಯಿಯ ಭಕ್ತಿಗೆ ಒಲಿದು ಇಲ್ಲಿಯೇ ನೆಲೆನಿಂತರು.
ಲೋಕಕಲ್ಯಾಣಕ್ಕಾಗಿ ವಿವಿಧ ಪ್ರದೇಶಗಳಿಗೆ ತೆರಳಿ ಜನರಿಗೆ ತಮ್ಮ ಪವಾಡಶಕ್ತಿಯಿಂದ ಒಳಿತನ್ನು ಅನುಗ್ರಹಿಸಿದರು. ಹೊನ್ನಾಳ ಗ್ರಾಮದ ಹತ್ತಿರ ತುಂಬಿ ಹರಿಯುತ್ತಿದ್ದ ಭೀಮಾ ನದಿಯನ್ನು ತಮ್ಮ ಹೆಗಲ ಮೇಲಿನ ಕಂಬಳಿಯನ್ನು ಹಾಸಿ, ಅದರ ಮೇಲೆ ಕುಳಿತು ದಾಟಿದ ಯೋಗಶಕ್ತಿಯ ಮಹಾಂತರು ಇವರಾಗಿದ್ದರು ಎಂಬುದು ಪ್ರತೀತಿ.
ಸದ್ಗುರು ಶ್ರೀ ಕೋರಿಸಿದ್ದೇಶ್ವರ ಮಹಾಶಿವಯೋಗಿಗಳ ಪುಣ್ಯಾರಾಧನೆಯನ್ನು ನಾಲವಾರ ಶ್ರೀಮಠ ಮಾತ್ರವಲ್ಲದೆ, ಯಡ್ರಾಮಿ ತಾಲೂಕಿನ ಗುರುಕ್ಷೇತ್ರ ಕಾಖಂಡಕಿ, ಶ್ರೀ ಕೋರಿಸಿದ್ದೇಶ್ವರ ಶಾಖಾ ಮಠಗಳಾದ ಕಲಬುರಗಿ ಕರಣೇಶ್ವರ ನಗರದಲ್ಲಿರುವ ಶಾಖಾ ಮಠದಲ್ಲಿ ಜೀವರ್ಗಿ ತಾಲೂಕಿನ ಬಿರಾಳ ಕೆ, ಮಂದೇವಾಲ, ಯಾದಗಿರಿ ಜಿಲ್ಲೆಯ ಕರಡಕಲ್, ಕೆಂಭಾವಿ, ಮುದನೂರು, ಕೊಪ್ಪಳ ಜಿಲ್ಲೆಯ ಹನುಕುಂಟಿ, ವಿಜಯಪುರ ಜಿಲ್ಲೆಯ ದೇವರ ನಾವದಗಿ, ಸೇರಿದಂತೆ ಎಲ್ಲಾ ಶಾಖಾ ಮಠಗಳಲ್ಲಿಯೂ ಭಕ್ತಿ-ಭಾವದಿಂದ ಆಚರಿಸಲಾಗುತ್ತದೆ.
