Oplus_0

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮದಿನಾಚರಣೆ | ಭಾರತವನ್ನು ಒಗ್ಗಟ್ಟಾಗಿಸಿದ್ದು ವಲ್ಲಭಭಾಯ್: ವೀರಣ್ಣ ಯಾರಿ

ನಾಗಾವಿ ಎಕ್ಸಪ್ರೆಸ್ 

ವಾಡಿ: ಪ್ರೀತಿ ಮತ್ತು ದಂಡಪ್ರಯೋಗದಂತಹ ಚಾಣಾಕ್ಷ ತಂತ್ರಗಳ ಮೂಲಕ ನೂರಾರು ರಾಜಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಿ, ದೇಶವನ್ನು ಒಂದಾಗಿ ಕಟ್ಟಿದ ಕೀರ್ತಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.

ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿದ ಅವರು, 1947ರ ಆಗಸ್ಟ್ 15ರಂದು ದಾಖಲೆಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತಾದರೂ, ದೇಶಾದ್ಯಂತ ಹಬ್ಬಿದ್ದ ನೂರಾರು ರಾಜಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಸೇರ್ಪಡೆಗೊಳಿಸುವುದು ಬೃಹತ್ ಸವಾಲಾಗಿತ್ತು. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ರೈತ ಚಳವಳಿಯ ರೂವಾರಿ ಹಾಗೂ ದೇಶದ ಮೊದಲ ಗೃಹಸಚಿವರಾಗಿದ್ದ ಪಟೇಲರು ತಮ್ಮ ದೂರದೃಷ್ಟಿಯಿಂದ ಈ ಕಠಿಣ ಕಾರ್ಯವನ್ನು ಅತ್ಯಂತ ಸಮರ್ಥವಾಗಿ ಪೂರ್ಣಗೊಳಿಸಿದರು ಎಂದು ಬಣ್ಣಿಸಿದರು.

1875ರ ಅಕ್ಟೋಬರ್ 31ರಂದು ಗುಜರಾತ್‌ನ ನಾಡಿಯಾಡ್‌ನಲ್ಲಿ ಜನಿಸಿದ ಪಟೇಲರು, 22ನೇ ವಯಸ್ಸಿನಲ್ಲಿ ಮ್ಯಾಟ್ರಿಕ್ ಮುಗಿಸಿ ನಂತರ ಕಾನೂನು ವ್ಯಾಸಂಗ ಮಾಡಿ ಜನಪ್ರಿಯ ಬ್ಯಾರಿಸ್ಟರ್ ಆಗಿ ಯಶಸ್ಸು ಕಂಡಿದ್ದರು. ಆದರೆ, 1918ರಲ್ಲಿ ಮಹಾತ್ಮ ಗಾಂಧೀಜಿಯವರ ತತ್ವಗಳಿಗೆ ಆಕರ್ಷಿತರಾಗಿ ತಮ್ಮ ಸಕಲ ಸಂಪತ್ತು ಮತ್ತು ಪ್ರಸಿದ್ಧ ವಕೀಲಿ ವೃತ್ತಿಯನ್ನು ತ್ಯಜಿಸಿ ದೇಶ ಸೇವೆಗೆ ಧುಮುಕಿದರು. ಸ್ವಾತಂತ್ರ್ಯ ಹೋರಾಟದ ಸರಳ ಜೀವನ ಹಾಗೂ ಕಷ್ಟಕಾರ್ಪಣ್ಯಗಳನ್ನು ಸಂತಸದಿಂದಲೇ ಸ್ವೀಕರಿಸಿದರು ಎಂದರು.

ಪಟೇಲರ ತ್ಯಾಗ, ಬದ್ಧತೆ ಮತ್ತು ದೂರದೃಷ್ಟಿಯ ಚಿಂತನೆಗಳ ಬುನಾದಿಯ ಮೇಲೆ ಇಂದು ನಮ್ಮ ದೇಶವು ಅಭಿವೃದ್ಧಿಯತ್ತ ಸಾಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಯುವ ಮುಖಂಡ ವಿಠಲ್ ನಾಯಕ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್ ಸಿ ಮೋರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ, ಹರಿ ಗಲಾಂಡೆ, ಅಶೋಕ ಪವಾರ, ರಿಚರ್ಡ್ ಮಾರೆಡ್ಡಿ, ಕಾಶಿನಾಥ ಶೆಟಗಾರ, ಯಂಕಮ್ಮ ಗೌಡಗಾಂವ, ನಿರ್ಮಲಾ ಇಂಡಿ, ಮಲ್ಲಿಕಾರ್ಜುನ ಸಾತಖೇಡ, ಕುಮಾರ ಜಾಧವ, ವಿಶ್ವರಾಧ್ಯ ತಳವಾರ, ರಾಮು ರಾಠೋಡ, ಬಿಕ್ಕು ಚವ್ಹಾಣ, ಶಿವಾನಂದ ಕಟ್ಡಿಮನಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!