ಕೈ ಹಿಡಿದ ಯೋಗೇಶ್ವರ್, ಚನ್ನಪಟ್ಟಣ ಕ್ಷೇತ್ರದಲ್ಲಿ ಅಸಲಿ ಆಟ ಶುರು, ಮೈತ್ರಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ನೇರಾನೇರ ಸ್ಪರ್ಧೆ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಪಿ.ಯೋಗೇಶ್ವರ್ ದಿಡೀರ್ ರಾಜಕೀಯ ಬೆಳವಣಿಗೆಯಿಂದ ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರಿಂದ ಅಸಲಿ ಆಟ ಈಗ ಶುರುವಾದಂತಾಗಿದೆ.
ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೈನಿಕನನ್ನು ಅಪರೇಷನ್ ಮಾಡುವಲ್ಲಿ ಯಶಸ್ವಿಯಾಗಿದ್ದರೆ. ಇತ್ತ ಕಡೆ ಮೈತ್ರಿ ಪಕ್ಷಗಳ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ವೈ.ವಿಜಯೇಂದ್ರ ಅವರಿಗೆ ಚಿಂತೆಗೀಡು ಮಾಡಿದೆ.
ಈ ಮೊದಲು ತ್ರಿಕೋನ ಸ್ಪರ್ಧೆ ಆಗುವ ಲಕ್ಷಣಗಳು ಕಂಡುಬಂದಿತು ಆದರೆ ಈಗ ಸಿ.ಪಿ.ಯೋಗೇಶ್ವರ್ ಕೈ ಹಿಡಿಯುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಹೀಗಾಗಿ ಈಗ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ನೇರಾನೇರ ಸ್ಪರ್ಧೆ ಏರ್ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕರ್ನಾಟಕ ರಾಜ್ಯದ ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಮೂರು ಕ್ಷೇತ್ರಗಳ ಉಪ ಚುನಾವಣೆಯ ಪೈಕಿ ಚನ್ನಪಟ್ಟಣ ಕ್ಷೇತ್ರ ಹೈವೋಲ್ಟೇಜ್ ಕದನವಾಗಿ ಮಾರ್ಪಟ್ಟಿದೆ.
ಇಡೀ ರಾಜ್ಯದ ಜನರ ಚಿತ್ತ ಚನ್ನಪಟ್ಟಣದ ಕಡೆ ಬೀರಿದೆ. ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವ ಮೂಲಕ ರಾಜಕೀಯ ಜಿದ್ದಾಜಿದ್ದಿಗೆ ಕಾರಣರಾಗಿದ್ದಾರೆ. ಈಗಾಗಲೇ ಹಲವು ಪಕ್ಷಗಳು ಬದಲಾಯಿಸಿ ರಾಜಕೀಯದಲ್ಲಿ ಯಶಸ್ಸು ಕಂಡ ಯೋಗೇಶ್ವರ್ ಈಗ ಮತ್ತೆ ರಾಜಕೀಯಕ್ಕೆ ಹೊಸ ಮುನ್ನುಡಿ ಬರೆಯಲು ಸಿದ್ದರಾಗಿದ್ದಾರೆ. ಮೈತ್ರಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಹೆಸರುಗಳು ಘೋಷಣೆ ಆದ ನಂತರವೇ ಉಪ ಚುನಾವಣೆಯು ಮತ್ತಷ್ಟು ರಂಗೇರಲಿದೆ.